ಕೀರ್ತನೆ - 487     
 
ಏನೇನ ದಾನವ ಮಾಡಲು - ಹರಿಯ | ಧ್ಯಾನಕೆ ಸಮವಾದ ದಾನಂಗಳುಂಟೆ ? ದಿನಕೊಂದು ಲಕ್ಷ ಗೋದಾನವ ಮಾಡಲು 1 ಅನುದಿನ ಉದಕದಾನವ ಮಾಡಲು ॥ ಮನಶುದ್ಧವಾದ ಭೂದಾನವ ಮಾಡಲು | ವನಜನಾಭನ ಧ್ಯಾನಕೆ ಸಮವುಂಟೆ ? ಉತ್ತಮವಾದ ವಸ್ತ್ರವ ದಾನಮಾಡಲು 1 ಮುತ್ತು ಮಾಣಿಕವ ದಾನವ ಮಾಡಲು || ಅತ್ಯಂತ ವಿದ್ಯಾ ಪ್ರದಾನವ ಮಾಡಲು | ಚಿತ್ತಜಪಿತನ ಧ್ಯಾನಕೆ ಸಮವುಂಟೆ ? ಶತಕೋಟಿ ಕನ್ಯಾಪ್ರದಾನವ ಮಾಡಲು | ಶತಶತ ಸುವರ್ಣ ದಾನವ ಮಾಡಲು ॥ ಮಿತಿಯಿಲ್ಲದೆ ಅನ್ನದಾನವ ಮಾಡಲು | ಕ್ಷಿತಿಪತಿಯ ಪಾದಧ್ಯಾನಕೆ ಸಮವುಂಟೆ ? ನಾನಾ ತೀರ್ಥದಲಿ ಸ್ನಾನವ ಮಾಡಲು | ಕಾನನದೊಳಗೆ ತಪವ ಮಾಡಲು | ಜ್ಞಾನಿಯಾಗಿ ಕಾಶೀಯಾತ್ರೆಯ ಮಾಡಲು 1 ಜಾನಕೀಪತಿಯ ಧ್ಯಾನಕೆ ಸಮವುಂಟೆ ? ಧಾರಣೆ ಪಾರಣೆ ಭೀಷ್ಮಪಂಚಕ ಮಾಡಿ | ಹರುಷದಿ ವಿಷ್ಣುಪಂಚಕ ಮಾಡಲು ॥ ಪರಮ ಕಠಿಣ ಚಾಂದ್ರಾಯಣ ಮಾಡಲು | ಪುರಂದರವಿಠಲನ ಧ್ಯಾನಕೆ ಸಮವುಂಟೆ ?