ಏನು ಇರದ ಎರಡು ದಿನದ ಸಂಸಾರ
ಜ್ಞಾನದಲಿ ದಾನಧರ್ಮವ ಮಾಡಿರಯ್ಯ
ಹಸಿದು ಬಂದವರಿಗೆ ಅಶನವೀಯಲು ಬೇಕು
ಶಿಶುವಿಗೆ ಪಾಲ್ಬೆಣ್ಣೆಯುಣಿಸಬೇಕು
ಹಸನಾದ ಭೂಮಿಯನು ಧಾರೆಯರೆಯಲು ಬೇಕು
ಪುಸಿಯಾಡದಲೆ ಭಾಷೆ ನಡೆಸಲೇಬೇಕು
ಕಳ್ಳತನಗಳ ಮಾಡಿ ಒಡಲ ಹೊರೆಯಲು ಬೇಡ
ಕುಳ್ಳಿರ್ದ ಸಭೆಯೊಳಗೆ ಕುಟಿಲ ನಡೆಸಲು ಬೇಡ
ಒಳ್ಳೆಯವ ನಾನೆಂದು ಬಲು ಹೆಮ್ಮೆಲಿರಬೇಡ
ಬಾಳ್ವೆ ಸ್ಥಿರವೆಂದು ನೀ ನಂಬಿ ಕೆಡಬೇಡ
ದೊರೆ ತನವು ಬಂದಾಗ ಕೆಟ್ಟು ನುಡಿಯಲು ಬೇಡ
ಸಿರಿ ಬಂದ ಕಾಲಕ್ಕೆ ಮೆರೆಯಬೇಡ
ಸಿರಿವಂತನಾದರೆ ಪುರಂದರವಿಠಲನ
ಚರಣಕಮಲವ ಸೇರಿ ಸುಖಿಯಾಗು ಮನುಜ