ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ
ವೇದ ಶಾಸ್ತ್ರ ಪಂಚಾಗ ಓದಿಕೊಂಡು ಪರರಿಗೆ
ಬೋಧನೆಯ ಮಾಡುವುದು
ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
ಚಂಡ ಭಟರಾಗಿ ನಡೆದು ಕತ್ತಿಢಾಲು ಕೈಲಿ ಹಿಡಿದು
ಖಂಡ ತುಂಡು ಮಾಡುವುದು
ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
ಅಂಗಡಿಗಳನ್ನೆ ಹೂಡಿ ವ್ಯಂಗ್ಯ ಮಾತುಗಳಾಡಿ
ಭಂಗಬಿದ್ದು ಗಳಿಸುವುದು
ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
ಕುಂಟೆ ತುದಿಗೆ ಕೊರಡುಹಾಕಿ ಹೆಂಟೆಮಣ್ಣು ಸಮಮಾಡಿ
ರೆಂಟೆ ಹೊಡೆದು ಬೆಳೆಸುವುದು
ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
ಬೆಲ್ಲದಂತೆ ಮಾತನಾಡಿ ಎಲ್ಲರನ್ನು ಮರುಳು ಮಾಡಿ
ಸುಳ್ಳು ಬೊಗಳಿ ತಿಂಬುವುದು
ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
ಕೊಟ್ಟಣವ ಕುಟ್ಟಿಕೊಂಡು ಕಟ್ಟಿಗೆಯ ಹೊತ್ತುಕೊಂಡು
ಕಷ್ಟಮಾಡಿ ತಿಂಬುವುದು
ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
ತಾಳದಂಡಿಗೆ ಶ್ರುತಿ ಮೇಳ ತಂಬೂರಿ ಹಿಡಿದುಕೊಂಡು
ಸೂಳೆಯಂತೆ ಕುಣಿಯುವುದು
ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
ಸನ್ಯಾಸಿ ಜಂಗಮ ಜೋಗಿ ಜಟ್ಟಿ ಮೊಂಡ ಭೈರಾಗಿ
ನಾನಾ ವೇಷ ಹಾಕುವುದು
ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
ಹಳ್ಳದಲ್ಲಿ ಕುಳಿತು ಕೊಂಡು ಕಲ್ಲು ದೊಣ್ಣೆ ಹಿಡಿದುಕೊಂಡು
ಕಳ್ಳತನವ ಮಾಡುವುದು
ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
ಅಂದಣ ಪಲ್ಲಕ್ಕಿ ಏರಿ ಮಂದಿ ಮಾರ್ಬಲ ಕೂಡಿ
ಚಂದದಿಂದ ಮೆರೆಯುವುದು
ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
ಉನ್ನಂತ ಪುರಂದರವಿಠಲ ರಾಯನ ಧ್ಯಾನವನು
ಮನಮುಟ್ಟಿ ಮಾಡುವುದು
ಮುಕ್ತಿಗಾಗಿ ಆನಂದಕಾಗಿ
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ಲೋಕನೀತಿ