ಎಚ್ಚರದಲಿ ನಡೆ ಮನವೆ - ನಡೆಮನವೆ -ಮುದ್ದು
ಅಚ್ಯುತನ ದಾಸರ ಒಡಗೂಡಿ ಬರುವೆ
ಧರ್ಮವ ಮಾಡುವುದಿಲ್ಲಿ - ಇನ್ನು
ಬ್ರಹ್ಮನ ಸಭೆಯ ತೋರುವರು ಮುಂದಲ್ಲಿ
ಕರ್ಮಯೋಜನೆಗಳು ಇಲ್ಲಿ - ಬೆನ್ನ
ಚರ್ಮವ ಸುಲಿಸಿ ತಿನ್ನಿಸುವರು ಅಲ್ಲಿ
ಅನ್ನದಾನವ ಮಾಳ್ಪುದಿಲ್ಲಿ - ಮೃ
ಷ್ಟಾನ್ನವ ತಂದು ಮುಂದಿಡುವರು ಅಲ್ಲಿ
ಅನ್ಯಾಯ ನುಡಿಯುವುದಿಲ್ಲಿ - ಭಿನ್ನ
ಭಿನ್ನವ ಮಾಡಿ ತಿನ್ನಿಸುವರು ಅಲ್ಲಿ
ಮೋಸವ ಮಾಡುವುದಿಲ್ಲಿ - ಸೀಸ
ಕಾಸಿ ಬಾಯೊಳಗೆ ಹೊಯ್ಯುವರಲ್ಲಿ
ದಾಸರ ಪೂಜಿಪುದಿಲ್ಲಿ -ಉ
ರ್ವೀಶಾಧಿಪತಿ ಬಂದನೆಂಬರು ಅಲ್ಲಿ
ವಂಚನೆ ಮಾಡುವುದಿಲ್ಲಿ - ಕಾದ
ಹಂಚಿನ ಪುಡಿಯ ತಿನ್ನಿಸುವರು ಅಲ್ಲಿ
ಪಂಚಾಮೃತದ ಪೂಜೆ ಇಲ್ಲಿ ನಿನಗೆ
ಕಂಚು ಕಾಳಾಂಜಿಯ ಪಿಡಿದಿಹರಲ್ಲಿ
ಚಾಡಿಯ ನುಡಿವುದು ಇಲ್ಲಿ ಅದ -
ನಾಡಿದ ನಾಲಿಗೆ ಸೀಳುವರಲ್ಲಿ
ಬೇಡಬಂದರೆ ಬಯ್ವುದಿಲ್ಲಿ ನಿನ್ನ
- ಓಡಾಡುವ ಕಾಲು ಕತ್ತರಿಪರಲ್ಲಿ
ಮದ್ದಿಕ್ಕಿ ಕೊಲ್ಲುವುದಿಲ್ಲಿ ಒದ್ದು
ಹದ್ದು ಕಾಗೆಗಳಿಗೆ ಈಯುವರಲ್ಲಿ
ಕ್ಷುದ್ರ ಬುದ್ಧಿಯ ನಡೆಪುದಿಲ್ಲಿ ದೊಡ್ಡ
ಗುದ್ದಲಿ ಬೆನ್ನೊಳು ಎಳೆಯುವರಲ್ಲಿ
ಕೊಟ್ಟಭಾಷೆಗೆ ತಪ್ಪುವುದಿಲ್ಲಿ ಕೈಯ -
ಕಟ್ಟಿ ಈಟಿಯಿಂದ ಇರಿಯುವರಲ್ಲಿ
ಕೊಟ್ಟ ಧರ್ಮವ ನಡೆಸುವುದಿಲ್ಲಿ ಬಲು
ಶ್ರೇಷ್ಠ ನೀನೆಂದು ಕೊಂಡಾಡುವರಲ್ಲಿ
ಆಲಯದಾನವು ಇಲ್ಲಿ ವಿ -
ಶಾಲ ವೈಕುಂಠನ ಮಂದಿರವಲ್ಲಿ
ಆಲಯ ಮುರಿಯುವುದಿಲ್ಲಿ ನಿನ್ನ
ಶೂಲದ ಮೇಲೇರಿಸಿ ಕೊಲುವರಲ್ಲಿ
ತಂದೆ ಮಾತನು ಮೀರುವುದಿಲ್ಲಿ ಹುಲ್ಲು
ದೊಂದೆಯ ಕಟ್ಟಿ ಸುಡಿಸುವರಲ್ಲಿ
ತಂದೆ ತಾಯ್ಸಳ ಪೂಜೆ ಇಲ್ಲಿ, ದೇ -
ವೇಂದ್ರನ ಸಭೆಯ ತೋರುವರು ಮುಂದಲ್ಲಿ
ಗಂಡನ ಬೈಯ್ಯುವುದಿಲ್ಲಿ ಬೆಂಕಿ
ಕೆಂಡವ ತಂದು ಬಾಯಲಿ ತುಂಬುವರಲ್ಲಿ
ಕೊಂಡೆಯ ನುಡಿಸುವುದಿಲ್ಲಿ ಬೆಂಕಿ
ಕುಂಡವ ತಂದು ತಲೆಯಲಿಡುವರಲ್ಲಿ
ಹೊನ್ನು ಹೆಣ್ಣನು ಬಯಸುವುದಿಲ್ಲಿ ನಿನ್ನ
ಕಣ್ಣಿಗೆ ಸುಣ್ಣವ ತುಂಬುವರಲ್ಲಿ
ಕನ್ಯಾದಾನವ ಮಾಳ್ಪುದಿಲ್ಲಿ ನಮ್ಮ
ಚೆನ್ನ ಪುರಂದರ ವಿಠಲನೊಲಿವನು ಅಲ್ಲಿ