ಈ ಸಿರಿಯ ನಂಬಿ ಹಿಗ್ಗಲಿ ಬೇಡ ಮನವೇ
ವಾಸುದೇವನ ಭಜಿಸಿ ಸುಖಿಯಾಗು ಮನವೇ
ಮಡದಿ ಮಕ್ಕಳು ಎಂದು ವಡವೆ ವಸ್ತುಗಳೆಂದು
ಸಡಗರದಿ ತಾ ಕೊಂಡು ಭ್ರಮಿಸಲೇಕೆ
ಬಿಡದೆ ಯಮನಾಳುಗಳು ಬಾ ಎಂದು ಎಳೆವಾಗ
ಮಡದಿ ಮಕ್ಕಳು ಕಡೆಗೆ ತೊಲಗುವರೊ ಮರುಳೆ
ನೆಂಟರೊಳಗೆ ಪೋಗಿ ನಾಲ್ಕುದಿನವಿದ್ದರೆ
ಎಂಟುದಿನದಾಯಾಸ ಪೋಗುವಂತೆ
ಉಂಟು ಸೌಭಾಗ್ಯವೆಂತೆಂಬ ಧೈರ್ಯವ ಬಿಟ್ಟು
ವೈಕುಂಠನ ಭಜಿಸು ನೀ ಭ್ರಷ್ಟ ಮನವೆ
ಉಂಟು ಆಶ್ರಯವೆಂದು ಬಡವನ ಕರೆತಂದು
ಕೊಟ್ಟು ಮಾಡಿದ ಧರ್ಮ ಫಲ ನಿನ್ನದು
ಇಷ್ಟಮೂರುತಿ ನಮ್ಮ ಪುರಂದರವಿಠಲನ
ನಿಷ್ಠೆಯಿಂದಲಿ ಭಜಿಸು ದುಷ್ಟಮನವೆ