ಕೀರ್ತನೆ - 456     
 
ಆವಗಂ ನೆನೆಮನವೆ ಸಕಲ ಚಿಂತೆಯ ಕಡಿದು | ಕಾವುದಿದು ಕೃಷ್ಣನಾಮ ಭಾವಿಸಲು ಯಮದೂತ ಮದಕರಿಗೆ ಕೇಸರಿಯು | ಶ್ರೀಕೃಷ್ಣ ದಿವ್ಯನಾಮ ವರವೇದ - ಶಾಸ್ತ್ರಗಳ ವ್ಯಾಸಮುನಿ ಮಥಿಸಲು ಸುಧೆಯಾದ ಕೃಷ್ಣನಾಮ | ಪರಮಭಕುತರು ಸವಿದು ಉಂಡು ಮುನಿಗಳ ಕಿವಿಗೆ ಎರೆದ ಶ್ರೀಕೃಷ್ಣನಾಮ | ಗುರುದ್ರೋಣ - ಭೀಷ್ಮ - ಅಶ್ವತ್ಥಾಮ - ಜಯದ್ರಥನ ಜಯಿಸಿತೈ ಕೃಷ್ಣನಾಮ | ಕುರುಸೇನೆಶರಧಿಯನು ಪಾಂಡವರ ದಾಟಿಸಿತು ಶ್ರೀಕೃಷ್ಣ ದಿವ್ಯನಾಮ ದ್ರೌಪದೀ ದೇವಿಯಭಿಮಾನವನು ಕಾಯ್ದುದಿದು ಶ್ರೀಕೃಷ್ಣದಿವ್ಯ ನಾಮ । ಆಪತ್ತು ಪರಿಹರಿಸಿ ಕುಕ್ಷಿಯೊಳು ಪರಿಕ್ಷೀತನ ರಕ್ಷಿಸಿತು ಕೃಷ್ಣನಾಮ ॥ ಗೋಪವನಿತೆಯರೆಲ್ಲ ಕುಟ್ಟುತಲಿ ಬೀಸುತ್ತಲಿ ಪಾಡುವುದು ಕೃಷ್ಣನಾಮ । ತಾಪಸನು ಸಾಂದೀಪ ಮುಚುಕುಂದರಿಗೆ ಮನೋ - ರಥವು ಶ್ರೀಕೃಷ್ಣನಾಮ ಸುಖದ ಅವಸಾನದಲಿ ಈ ನಾಮ ಗಾಯನವು ಶ್ರೀಕೃಷ್ಣದಿವ್ಯನಾಮ | ದುಃಖಾವಸಾನದಲಿ ಈ ನಾಮವೇ ಜಪವು ಶ್ರೀಕೃಷ್ಣದಿವ್ಯನಾಮ ॥ ಸಕಲ ಸುಖಗಳ ಕೊಟ್ಟು ಸದ್ಗತಿಯ ನೀವುದಿದು ಶ್ರೀಕೃಷ್ಣದಿವ್ಯನಾಮ ॥ ಸುಖವನಧಿ ಅರವಿಂದನಾಭ ಪುರಂದರವಿಠಲ ನೊಲುಮೆಯಿದು ದಿವ್ಯನಾಮ