ಆರು ಒಲಿದರೇನು ನಮಗಿನ್ನಾರು ಮುನಿದರೇನು
ಕ್ಷೀರಸಾಗರ ಶೇಷಶಯನನ ಒಲುಮೆಯುಳ್ಳ ಹರಿದಾಸರಿಗೆ
ಪಡೆದ ತಾಯಿ - ತಂದೆ ನಮ್ಮೊಳು ಅಹಿತವ ಮಾಡಿದರೇನು
ಮಡದಿ ಮಕ್ಕಳು ನೆಂಟರಿಷ್ಟರು ಮುನಿಸು ಮಾಡಿದರೇನು
ಒಡನೆ ತಿರುಗುವ ಗೆಳೆಯರು ನಮ್ಮೊಳು ವೈರವ ಬೆಳೆಸಿದರೇನು
ಕಡಲಶಯನನ ಕರುಣಾಂಬುಧಿಯ ಒಲುಮೆಯುಳ್ಳ ಹರಿದಾಸರಿಗೆ
ಊರನಾಳುವ ದೊರೆಗಳು ನಮ್ಮನು ಹೊರಗೆ ನೂಕಿದರೇನು
ಮಾರಿಯ ಹಿಂಡು ಮುಸಲರ ದಂಡು ಮೈಗೆ ಮುತ್ತಿದರೇನು ||
ಅರಣ್ಯದಿ ಹರಿದಾಡುವ ಮೃಗಗಳು ಅಡ್ಡಗಟ್ಟಿದರೇನು
ವಾರಿಜನಾಭನ ವಸುದೇವಸುತನ ಒಲುಮೆಯುಳ್ಳ ಹರಿದಾಸರಿಗೆ
ಕಾನನದೊಳು ಹರಿದಾಡುವ ಸರ್ಪವು ಕಾಲಿಗೆ ಸುತ್ತಿದರೇನು
ಜೇನಿನಂದದಿ ಕ್ರೀಮಿಕೀಟಂಗಳು ಚರ್ಮಕೆ ಮುತ್ತಿದರೇನು ||
ಭಾನು ಮಂಗಳ ಬುಧ ಶುಕ್ರಂಗಳ ಬಲವು ತಪ್ಪಿದರೇನು
ಮಾಣದೆ ಭಜಿಸುವ ಪುರಂದರವಿಠಲನ
ಒಲುಮೆಯುಳ್ಳ ಹರಿದಾಸರಿಗೆ
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ಲೋಕನೀತಿ