ಸಾಕು ಸಾಕು ಸಂಸಾರ ಸಜ್ಜಾಗಿಲ್ಲ ಒಲ್ಲೆ ಒಗೆತನವ
ಆರುಮಂದಿ ಗಂಡರಾಳುವರು ಎನ್ನ
ಆರುಮಂದಿಗೆ ಮೂರು ಸುತರೆನಗೆ
ಆರು ಮೂರೇಳ್ವರು ಭಾವ – ಮೈದುನರೆಲ್ಲ
ಆರರೆಂದರೆ ಬಿಡರು ಆರಿಗುಸುರಲಮ್ಮ
ಹತ್ತುಮಂದಿ ಬೆನ್ನ ಮುತ್ತಿಕೊಂಡರೆ
ಮತ್ತೆ ಬಿಟ್ಟೆನೆಂದೆ ಬಿಡಗೊಡರು
ಅತ್ತಿಗೆ ನೆಗಣ್ಣಿ ಹೊತ್ತು ಹೊತ್ತಿನೊಳೆಮ್ಮ
ನೆತ್ತಿಯೊಳು ಹಸ್ತವಿಟ್ಟೆನ್ನ ಸೆಣಸುವರಮ್ಮ
ಪಂಚರೈವರು ಎನ್ನ ತೊಂತ ಹಂತಯಂದು
ಸಂಚಿತದ ಕರ್ಮವನುಣಿಸುವರು
ವಂಚನೆಯಳಿದ ಪ್ರಪಂಚವನು ಕಳೆದಿಹ
ಮಿಂಚಿನ ಪರಿಯ ವಿರಿಂಚಿ ಬರೆದಿಹನಮ್ಮ
ಜೇಷ್ಠನಾಗಿಹ ಪುತ್ರ ಧರ್ಮನ ಅಗಲಿಸಿ
ಭ್ರಷ್ಟ ಆತ್ತೆಯು ಮೃತ್ಯುವಾಗಿಹಳು
ಮೆಟ್ಟಿಲಿನ ಹೊರಗೆ ಕಣ್ಣಿಟ್ಟು ಸಾಧುಗಳನು
ದೃಷ್ಟಿಸಿ ನೋಳ್ವೆನೆಂದರೆ ಕ್ಷಣ ಬಿಡರಮ್ಮ
ಒಂಬತ್ತು ಬಾಗಿಲ ಊಳಿಗವನು ಮಾಳ್ಪ
ಕುಂಭಕದ ನರಕ ಕಾವರ ದಾಳಿ
ಡಂಭಕವನು ಬಿಟ್ಟು ಇಂಬಿನೊಳಿಟ್ಟು ವಿ
ಶ್ವಂಭರ ಪುರಂದರವಿಠಲ ಧ್ಯಾನದ ಗುಟ್ಟು
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ತತ್ತ್ವ ವಿವೇಚನೆ