ಸ್ಥಳವಿಲ್ಲವೆ ಭಾಗವತರೇ
ಒಳಗೆ ಹೊರಗೆ ಸಂದಣಿ ತುಂಬಿದೆ ನೋಡಿ
ಅಯ್ದೊಕ್ಕಲಿದರೊಳಗುಂಟು - ಮತ್ತೆ
ಅಯ್ದು ಮಂದಿಯು ಬೇರೆ ಉಂಟು
ಅಯ್ದು ನಾಲ್ಕು ಇದರೊಳಗುಂಟು -ನೀವು
ಬೈದರೆ ಏನು ತೆಗೆಯಿರಿ ನಿಮ್ಮ ಗುಂಟು
ಆರುಮಂದಿ ಕಳ್ಳರುಂಟು -ಮ
ತ್ತಾರು ಮಂದಿಗೆ ಮತ್ತೆ ಪ್ರೇರಕರುಂಟು
ಪ್ರೇರಕರಿಗೆ ಕರ್ತರುಂಟು - ವಿ
ಚಾರಿಸುವುದಕೆ ನಿಮಗೇನುಂಟು ?
ಅತ್ತೆಯವಳು ಬಲು ಖೋಡಿ - ಎನ್ನ
ಒತ್ತಿ ಆಳುವ ಪುರುಷನು ಬಲುಹೇಡಿ
ಮತ್ತೆ ಮಾವನು ಅಡನಾಡಿ- ಸರಿ
ಹೊತ್ತಿಗೆ ಬರುವ ಮೈದುನ ಬಲುಕೇಡಿ
ನೆಗೆಣ್ಣಿ ಎಂಬುವಳು ಕೋಪಿ- ಮಲ
ಮಗಳು ಕಂಡರೆ ಸೇರಳು ಬಲು ಪಾಪಿ
ಹಗೆಗಾತಿ ಅತ್ತಿಗೆ ಶಾಪಿ - ಸುತ್ತ
ಬೊಗಳುವಳು ತಾಳೆನು ನಾನು ಮುಂಗೋಪಿ
ಎಷ್ಟು ಹೇಳಲಿ ನಿಮಗೆಲ್ಲ - ಈ
ಕಷ್ಟ ಸಂಸಾರದೊಳಗೆ ಸುಖವಿಲ್ಲ
ಸ್ಪಷ್ಟವಾಗಿ ಪೇಳ್ವೆ ಸೊಲ್ಲ – ದೇವ
ಸೃಷ್ಟೀಶ ಪುರಂದರವಿಠಲ ಬಲ್ಲ.