ತಾನು ಮಾಡಿದ ಕರ್ಮ ತನಗಲ್ಲದೆ 1
ಏನ ಮಾಡಿದರು ಹಿಂದಿನ ಕರ್ಮವಲ್ಲದೆ
ಮರಳಿ ಮರಳಿ ನೀರ ಹೊಕ್ಕು ಹೊರಟರೆ ಇಲ್ಲ |
ಹೊರೆ ಹೊತ್ತು ತಲೆಪರಟೆಗಟ್ಟಿದರೂ ಇಲ್ಲ ॥
ಬರಿಯೆ ಭೂಮಿಯ ಕೆದರಿ ತೋಡಿ ನೋಡಿದರಿಲ್ಲ |
ಪರರಿಗೆ ಬಾಯ್ದೆರೆದರೇನೊ ಇಲ್ಲ
ಬಲಿದ ದೇಹವನಲ್ಪ ಮಾಡಿ ಬೇಡಿದರಿಲ್ಲ |
ನೆಲದಿ ಕೊಲೆಗಡುಕ ತಾನಾದರಿಲ್ಲ |
ತಲೆಯಲಿ ಜಡೆಗಟ್ಟಿ ಅಡವಿ ಸೇರಿದರಿಲ್ಲ
ಕೊಳಲೂದಿ ತುರುಗಳನ್ನು ಕಾಯ್ದರಿಲ್ಲ
ಧೀರತನ ಬಿಟ್ಟು ದಿಗಂಬರನಾದರು ಇಲ್ಲ |
ಮೀರಿದ್ದ ರಾಹುತ ತಾನಾದರಿಲ್ಲ |
ವರದ ಶ್ರೀ ಪುರಂದರವಿಠಲನ ಚರಣವ ।
ಸ್ಮರಿಸುತ ಅನುದಿನ ಸುಖಿಯಾಗಿರಯ್ಯ