ತನುವಿನೊಳಗೆ ಅನುದಿನವಿದ್ದು
ಎನಗೊಂದು ಮಾತ ಪೇಳದೆ ಪೋದೆ ಹಂಸಾ
ಜಾಳಾಂದ್ರವೆಂಬದು ಒಂಬತ್ತು ಬಾಗಿಲ ಮನೆ
ರೂವಾರವೆಂಬ ಒಂಬತ್ತು ಬಾಗಿಲ ದಾಟಿ
ಗಾಳಿ ತಂಪಿನೊಳಿದ್ದು ತಾನು ಹಾರಿ ಪೋಪಾಗ
ಕಾಯಕೆ ಹೇಳದೆ ಹೋಯಿತು ಒಂದು ಮಾತ್ರ
ಹಳ್ಳ ಕೊಳ್ಳಗಳಲಿ ತಂಪಿನ ತಡಿಯಲಿ
ಬಳ್ಳಿ ಕಾಯಿ ಕಾತು ಫಲವಾಯಿತು
ಒಳ್ಳೆಯ ತನಿಹಣ್ಣು ಉದುರಿ ತಾ ಪೋಪಾಗ
ಬಳ್ಳಿಗೆ ಹೇಳದೆ ಹೋಯಿತು ಒಂದು ಮಾತ
ಗಟ್ಟಿ - ಬೆಟ್ಟಗಳಲಿ ಶಾಖೆಯ ತುದಿಯಲಿ
ಕಟ್ಟಿತು ಜೇನದು ಸುಖಕಾಗಿ
ಗಟ್ಟಿ ತುಪ್ಪವನುಂಡು ನೊಣ ಹಾರಿ ಪೋಪಾಗ
ಹಿಪ್ಪೆಗೆ ಹೇಳದೆ ಹೋಯಿತು ಒಂದು ಮಾತ
ರವಿವಿಸ್ತಾರವ ಹಂಸ ಕೇಳಿದನೈ ನಿನ್ನ
ಪೆಸರ ಪೇಳಲೆನ್ನಳವಲ್ಲ
ರಸ ವಸ್ತುವನುಂಡು ಜ್ಯೋತಿ ತಾ ಪೋಪಾಗ
ಪಣತಿಗೆ ಪೇಳದೆ ಹೋಯಿತು ಒಂದು ಮಾತು
ಸಿರಿಪುರಂದರ ವಿಠಲನ ಮಾತು ಪುಸಿಯಲ್ಲ
ಹಣೆಯ ಬರಹವ ಮೀರಲು ಬಲ್ಲುದೆ ?
ಸರವನಾಣೆಯ ಮುತ್ತು ಆಗಲಿ ತಾ ಪೋಪಾಗ
ಚಿಪ್ಪಿಗೆ ಪೇಳದ್ಹೋಯಿತು ಒಂದು ಮಾತ
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ತತ್ತ್ವ ವಿವೇಚನೆ