ಅಂಬಿಗ ನಾ ನಿನ್ನ ನಂಬಿದೆ- ಜಗ
ದಂಬಾರಮಣ ನಿನ್ನ ಹೊಂದಿದೆ
ತುಂಬಿದ ಹರಿಗೋಲಂಬಿಗ ಅದ
ಕೊಂಬತ್ತು ಛಿದ್ರಗಳಂಬಿಗ ||
ಸಂಭ್ರಮದಿಂದಲಿ ಅಂಬಿಗ ಅದ
ರಿಂಬನರಿತು ನಡೆಸಂಬಿಗ -
ಹೊಳೆಯ ಅಬ್ಬರ ನೋಡಂಬಿಗ ಅಲ್ಲಿ
ಸೆಳವು ಬಹಳ ಕಾಣೋ ಅಂಬಿಗ ॥
ಸುಳಿಗೊಳಗಾದೆನು ಅಂಬಿಗ ಎನ್ನ
ಸೆಳೆದುಕೊಂಡು ಒಯ್ಯೋ ಅಂಬಿಗ
ಹತ್ತು ಬೆಂಬಡಿಗರು ಅಂಬಿಗರು-ಅಲ್ಲಿ
ಒತ್ತಿ ಬರುತಲಿಹರಂಬಿಗ
ಹತ್ತುವರೆತ್ತಲು ಅಂಬಿಗ ಎನ್ನ
ಎತ್ತಿಕೊಂಡು ಒಯ್ಯೋ ಅಂಬಿಗ
ಆರು ತೆರೆಯ ನೋಡಂಬಿಗ ಸುತ್ತಿ
ಮೀರಿ ಬರುತಲಿವೆ ಅಂಬಿಗ ॥
ಆರೆನೆಂತಿಂತು ಅಂಬಿಗ ಮುಂದೆ
ದಾರಿಯ ತೋರಿಸು ಅಂಬಿಗ
ಸತ್ಯವೆಂಬುವ ಹುಟ್ಟು ಅಂಬಿಗ ಸದು
ಭಕ್ತಿಯೆಂಬುವ ಪಾತ್ರ ಅಂಬಿಗ ॥
ನಿತ್ಯಮುಕ್ತ ನಮ್ಮ ಪುರಂದರವಿಠಲನ
ಮುಕ್ತಿಮಂಟಪಕೆ ಒಯ್ಯೋ ಅಂಬಿಗ