ಕೀರ್ತನೆ - 396     
 
ಅನುದಿನದಲಿ ಬಂದು ತನುವ ಸೂರೆಯಗೊಂಡು | ಎನಗೊಂದು ಮಾತ ಪೇಳೊ ಜೀವವೆ ! ಘನಕೋಪದಲಿ ಬಂದು ಯಮನವರಳೆದೊಯ್ವಾಗ | ನಿನಕೂಡಿನ್ನೇತರ ಮಾತೂ ಕಾಯವೆ! ಬೆಲ್ಲದ ಹೇರಿನಂತೆ ಬೇಕಾದ ಬಂಧು - ಬಳಗ ನಿಲ್ಲೊ ಮಾತನಾಡತೇನೆ ಜೀವವೆ | ನಿಲ್ಲಗೊಡದೆ ಬಂದು ಯಮನವರೆಳೆದೊಯ್ದಾಗ | ಬೆಲ್ಲ ಬೇವಾಯಿತಲ್ಲೋ ಕಾಯವೆ !| ಸಕ್ಕರೆ ಹೇರಿನಂತೆ ಸವಿದುಂಡು ಪಾಯಸವ | ದಿಕ್ಕೆಟ್ಟು ಹೋಗುತೀಯೋ ಜೀವವೆ ॥ ದಕ್ಕಗೊಡದೆ ಬಂದು ಯಮನವರೆಳೆದೊಯ್ವಾಗ | ಸಕ್ಕರೆ ವಿಷವಾಯ್ತೋ ಕಾಯವೆ ! ಅಂದಣದೈಶ್ವರ್ಯ ದಂಡಿಗೆ -ಪಲ್ಲಕ್ಕಿ । ಮಂದಗಮನೆಯರು ಜೀವವೆ ॥ ಮಂದಗಮನೆ ಯಾರೊ ಮಡದಿ -ಮಕ್ಕಳು ಯಾರೋ ಬಂದಂತೆ ಹೋಗ್ತಿನಿ ಕಾಯವೆ ! ಸೋರುವ ಮನೆಯಲಿ ಧ್ಯಾನ - ಮೌನಾದಿಗಳು ಬೇರಿತ್ತು ನಿನ್ನ ಮನಸು ಜೀವವೆ ।।1 ನೀರಮೇಲಣ ಗುಳ್ಳೆ ತೋರಿ ಹಾರಿದಂತೆ | ಯಾರಿಗೆ ಯಾರಿಲ್ಲ ಕಾಯವೆ ! ಹುಟ್ಟಿದ್ದು ಹೊಲೆಯೂರು ಬೆಳದದ್ದು ಮೊಲೆಯೂರು | ಇಟ್ಟದ್ದು ಈ ಊರು ಜೀವವೆ ॥ ಸೃಷ್ಟಿಗೊಡೆಯ ನಮ್ಮ ಪುರಂದರವಿಠಲನ ಗಟ್ಟಿ ಪೂಜೆಯ ಮಾಡೊ ಕಾಯವೆ !