ವಾಸುದೇವ ನಿನ್ನ ವರ್ಮ ಕರ್ಮಂಗಳ
ದೇಶ ದೇಶದೊಳು ಹೇಳಲೆ ?
ಬೇಸರಿಯದೆ ಎನ್ನ ಹೃದಯ ಕಮಲದಲ್ಲಿ
ವಾಸವಾಗಿ ಸುಮ್ಮನಿರುವೆಯೊ ?
ಮತ್ತ್ವರೂಪನಾಗಿ ಮನಸು ಕಾಣಿಸಿಕೊಂಡು ಮಕ್ಕಳ
ತಿದ್ದಿದ್ದು ಹೇಳಲೆ ?
ಉತ್ಸಾಹದಿಂದ ನಿಗಮವ ತಂದು ಬ್ರಹ್ಮಗೆ
ಮೆಚ್ಚಿಕೊಟ್ಟದ್ದು ನಾ ಹೇಳಲೆ
ಕಡಗೋಲು ಮಂಡೆಯಂದದಿ ಕೈಕಾಲು
ಮುದುಡಿಕೊಂಡದ್ದು ನಾ ಹೇಳಲೆ ?
ಕಡಲೊಳಗಿಂದ ಪಾತಾಳಕೆ ಇಳಿದಿಳೆ ಪಡೆದಾತನ
ಸುದ್ದಿ ಹೇಳಲೆ ?
ಹುಚ್ಚುಮನಸುಮಾಡಿ ಕಚ್ಚುತ ಕೆದರುತ ರಚ್ಚೆಯಿಕ್ಕಿದ
ಸುದ್ದಿ ಹೇಳಲೆ ?
ಮುಚ್ಚಿದ ಭೂಮಿಯ ಹಲ್ಲಿಂದ ಕಿತ್ತಿದ ಹೆಚ್ಚುತನವ
ನಾನು ಹೇಳಲೆ
ಕಂದನ ಮಾತಿಗೆ ಕಡುಕೋಪದಿಂ ಬಂದು
ಕಂಬವನೊಡೆದದ್ದು ಹೇಳಲೆ ?
ಕುಂದದೆ ಹಿರಣ್ಯಕಶಿಪುವಿನುದರ ಸೀಳಿ ಕರುಳ್ಮಾಲೆ
ಧರಿಸಿದ್ದು ಹೇಳಲೆ
ಬಾಲನಾಗಿ ಬ್ರಹ್ಮಚಾರಿ ವೇಷವ ತೋರಿ ಬಲಿಯ
ಬೇಡಿದುದನು ಹೇಳಲೆ ?
ಲೀಲೆಯಿಂದಲಿ ಧರೆಯ ಈರಡಿ ಮಾಡಿದ ಜಾಲತ್ವವನು
ನಾನು ಹೇಳಲೆ
ಹೆಸರಿಲ್ಲದೆ ಹೋಗಿ ಹೆತ್ತತಾಯ್ ತಲೆಕುಟ್ಟಿ ಕೊಡಲಿಯ
ಪಿಡಿದದ್ದು ಹೇಳಲೆ ?
ಸೋಸಿ ದೈತ್ಯರನೆಲ್ಲ ರೋಸಿ ಪ್ರಾಣವ ಕೊಂಡ
ದೋಷತನವ ನಾನು ಹೇಳಲೆ
ತಾಯ ಮಾತನೆ ಕೇಳಿ ತಮ್ಮನ ಒಡಗೂಡಿ
ಅಡವಿಯೊಳಿದ್ದುದು ಹೇಳಲೆ ?
ಮಾಯಾಸೀತೆಗಾಗಿ ರಾವಣನನು ಕೊಂದು ಮಹಿಮೆಯ
ಮೆರೆದದ್ದು ಹೇಳಲೆ ?
ತರಳತನದಲಿ ದುರುಳನಾಗಿ ಬಂದ ಒರಳೆಳೆತಂದದ್ದು ಹೇಳಲೆ
ಬೆರಳಿಂದ ಗಿರಿಯೆತ್ತಿ ಕಂಸನ ಕೊಂದ ಆ ದುರುಳತನದ
ಸುದ್ದಿ ಹೇಳಲೆ
-------------------------------------
ರಾಯ ರಾವುತನಾಗಿ ರಾಯರ ಮನೆ ಪೊಕ್ಕು ಕಡುಗವ
ಪಿಡಿದದ್ದು ಹೇಳಲೆ ?
'ಆಯತದಿಂದ ಕಲಿಯಲಿದ್ದು ಮನುಜರ ಮಾಯವ
ತೋರಿದ್ದು ಹೇಳಲೆ
ಧರೆಯೊಳಗಧಿಕವಾದ ಉರಗಗಿರಿಯಲ್ಲಿ ಸ್ಥಿರವಾಗಿ
ನಿಂತದ್ದು ಹೇಳಲೆ ?
ಕರುಣದಿಂ ಭಕುತರ ಹೊರೆವ ಪುರಂದರವಿಠಲನೆಂದು
ನಾ ಹೇಳಲೆ
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ಪುರಾಣ ಕಥಾನಕಗಳು