ಬಂದದೆಲ್ಲವೂ ಬರಲಿ ಗೋ
ವಿಂದನ ದಯೆ ನಮಗಿರಲಿ
ಮಂದರಧರ ಗೋವಿಂದ ಮುಕುಂದನ
ಸಂದರುಶನ ನಮಗೊಂದೇ ಸಾಲದೆ ?
ಆರು ಅರಿಯದಿರಲೆನ್ನ - ಮುರಾರಿಯು ವರದ ಪ್ರಸನ್ನ
ತೋರುವ ದುರಿತದ ಬೆನ್ನ - ಭವಹಾರಿ ಕೃಪಾಂಬುಧಿ ಚೆನ್ನ |
ಶ್ರೀರಮಣನ ಶ್ರೀಚರಣ ಸೇವಕರಿಗೆ ಘೋರಯಮನು ಶರಣಾಗತನಲ್ಲವೆ ?
ಅರಗಿನ ಮನೆಯೊಳಗಂದು ಪಾಂಡವರನು ಕೊಲಬೇಕೆಂದು
ದುರುಳ ಕುರುಪ ಕಪಟದಲಿ ಹಾಕಿರುತಿರೆ ಆ ಕ್ಷಣದಲಿ ||
ಹರಿಕೃಪೆಯವರಲ್ಲಿದ್ದ ಕಾರಣ
ದುರಿತವೆಲ್ಲ ಬಯಲಾದುದಲ್ಲವೆ ?
ಸಿಂಗನ ಪೆಗಲೇರಿದರೆ - ಕರಿಭಂಗವೇಕೆ ಮತ್ತವಗೆ ।
ರಂಗನ ದಯವುಳ್ಳವಗೆ - ಭವಭಂಗದ ಭೀತಿಯ ಹಂಗೆ |
ಮಂಗಳ ಮಹಿಮ ಶ್ರೀ ಪುರಂದರ ವಿಠಲನ
ಹಿಂಗದ ದಯೆವೊಂದಿದ್ದರೆ ಸಾಲದೆ ?
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ಪುರಾಣ ಕಥಾನಕಗಳು