ಕೃಷ್ಣೇತಿ ಮಂಗಳಂ ದಿವ್ಯನಾಮ
ಇಷ್ಟರಿಂದಲಿ ಭವಬಂಧನ
ನಷ್ಟವಾಗಿ ಹೋಹುದೋ
ನಾರದಮುನಿ ತಾನು ನರಕ ಪಟ್ಟಣಕೆ ಹೋಗಿ
ವಾರೀಜನಾಭ ಎಂದು ಒದರಿದಾಗ
ಘೋರ ಪಾತಕವೆಲ್ಲ ದೂರವಾಗಿ ಹೋಯ್ತು
ಸೂರೆಯಾಯಿತು ಸ್ವರ್ಗಲೋಕವೆಲ್ಲ
ಅಜಮಿಳನು ಈ ನಾಮ ಅಂತ್ಯಕಾಲಕೆ ಸ್ಮರಿಸೆ
ನಿಜಪದವಿಯೈದಿದನು ನಿಮಿಷದಲಿ ॥
ಭುಜಗಭೂಷಣನು ತಾ ಶ್ರೀರಾಮನಾಮವ
ನಿಜಕಾಂತೆಯನು ಕರೆದು ಉಪದೇಶವಿತ್ತ
ಪಂಚಪಾಂಡವರನು ಪರಿಪಾಲಿಸಿತು ನಾಮ
ಪಾಂಚಾಲೀ ಮೊರೆ ಕೇಳಿ ಪೊರೆಯಿತು ನಾಮ ॥
ವಂಚನೆ ಮಾಡಿ ಕೌರವರ ಮಡುಹಿ ನಿ -
ಶ್ಚಿಂತೆಯಲಿ ಪಾಂಡವರ ಪಟ್ಟಗಟ್ಟಿದ ನಾಮ
ಸರಸಿಯೊಳಗೆ ಮುಳುಗಿ ಅರಿಯ ಬಾಧೆಗೆ ಸಿಲುಕಿ
ಕರಿರಾಜ ಹರಿಯೆಂದು ಮೊರೆಯಿಡಲು |
ತ್ವರಿತದಿಂದಲಿ ಬಂದು ಕರಿಯನುದ್ಧರಿಸುತ
ಕರಿರಾಜವರದನೆಂದೆನಿಸಿಕೊಂಡ ನಾಮ
ಧ್ರುವ ತನ್ನ ತಂದೆ ತೊಡೆಯ ಮೇಲೇರಲು ಪೋಗೆ
ಅವನ ಮಲತಾಯಿ ಗರ್ಜಿಸಿದಳಾಗ
ಧ್ರುವ ಸುಖಬಿಟ್ಟು ವನಕೆ ಪೋಗಿ ತಪ ಮಾಡಿ
ಸವಿಯಾದಚಲಪದವ ಪಡೆದನಾಗ
ಹಿರಣ್ಯಕಶಿಪು ತನ್ನ ಮಗನ ಬಾಧೆಯ ಪಡಿಸೆ
ಗಿರಿಯ ಶಿಖರದಿಂದಿಡಾಡಲು ||
ನರಹರೆ ನರಹರೆ ರಕ್ಷಿಸೆಂದನ್ನಲು
ನರಸಿಂಹ ರೂಪದಿಂದವನ ಪಾಲಿಸಿದ
ಕಂದನ ಅಪರಾಧವ ಕೇಳದೆ ನೃಪನು ತಾ
ನಂದತಿ ದಾರುಣ ಕಡಹದೋಳು ಕೆಡಹೆ
ಅಂದು ಸುಧನ್ವ ಶ್ರೀಕೃಷ್ಣನೆಂದೆನಲಾಗಿ
ಬೆಂದು ಕುದಿವ ಎಣ್ಣೆ ತಣ್ಣೀರಾಯಿತು
ಅಸುರ ಬಾಧೆಗೆ ಸಿಲುಕಿ ಅಶೋಕವನದಲಿ
ಶಶಿಮುಖಿ ಬೀಜಮಂತ್ರವ ಜಪಿಸೆ ||
ಅಸುರನ ಕೊಂದು ಅಶೋಕವನವ ಬಿಡಿಸಿ
ವಸುಧೀ ಸುತೆಯ ಸಲಹಿದ ರಾಮನಾಮ
ಪರಿಪರಿ ಭಕ್ತರನು ಪಾಲಿಸಿತು ಈ ನಾಮ
ಪರಮ ಮಂಗಲವು ಪಾವನವು ಈ ನಾಮ ॥
ಸುರರು ಬ್ರಹ್ಮಾದಿಗಳು ಸ್ತೋತ್ರ ಮಾಡುವ ನಾಮ
ಧರೆಯೊಳು ಸಿರಿ ಪುರಂದರ ವಿಠಲ ನಾಮ
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ಪುರಾಣ ಕಥಾನಕಗಳು