ಕೀರ್ತನೆ - 358     
 
ಇನ್ನು ಪುಟ್ಟಿಸದಿರಯ್ಯ ಪುಟ್ಟಿಸಿದಕೆ ಪಾಲಿಸಯ್ಯ ಎನ್ನ ದಯದಿ ಪಾಲಿಸಯ್ಯ ನಿನ್ನ ಚರಣಾಂಬುಜವ ನಂಬಿದೆನೊ ಶ್ರೀ ಹರಿಯೆ ಬೆನ್ನು ಬಿದ್ದೆನು ಭವಬಂಧನವ ಬಿಡಿಸಯ್ಯ ಅಮರೇಂದ್ರವಂದಿತನೆ ಅನಂತಮಹಿಮನೆ ಕಮಲಸಖಾನಂತಕರನೆ ॥ ಕಮಲಾಯತಾಂಬಕನೆ ಕಾಮಿತದಾಯಕನೆ ವಿಮಲ ಗುಣ ವಿಭೀಷಣಗೆ ಒಲಿದ ದಯದಿಂದಲೆನ್ನ ಅಜಮಿಳ ಅಂಬರೀಷ ಅಕ್ರೂರ ವಿದುರಗೆ ಗಜರಾಜ ಗಿರಿಜೇಶಗೆ | ನಿಜಭಕ್ತ ಪ್ರಹ್ಲಾದ ಅಜ ಧ್ರುವ ಅರ್ಜುನಗೆ ದ್ವಿಜಸುತ ರುಕ್ಕಾಂಗದರಿಗೊಲಿದ ದಯದಿಂದಲೆನ್ನ ಅವರಂತೆ ನಾನಲ್ಲ ಅವರ ದಾಸರ ದಾಸ ಸವರಿ ಬಿಸುಟೆನ್ನ ದೋಷ | ಪವಿತ್ರನ್ನ ಮಾಡಯ್ಯ ಪುಂಡಲೀಕ ವರದನೆ ಅವಸರಕೆ ದ್ರೌಪದಿಗೆ ಒಲಿದ ದಯದಿಂದಲೆನ್ನ ಎಂದೆಂದು ನಿನ್ನ ಪಾದವೆನಗೆ ನೆಲೆಯಾಯಿತು ಎಂದೆಂದು ನಿನ್ನ ನಾಮಭಜನೆ ॥ ಎಂದೆಂದು ನೀಯೆನ್ನ ಬಿಡದೆ ಪಾಲಿಸೊ ಸ್ವಾಮಿ ಅಂದು ಅಂಜನೆಕಂದನಿಗೆ ಒಲಿದ ದಯದಿಂದಲೆನ್ನ ಅಂತರಂಗದುಬ್ಬಸವ ಅಯ್ಯಾ ನಿನಗುಸಿರುವೆನು ಚಿಂತೆಗಳ ಪರಿಹರಿಸೊ || ಸಂತತ ಪಾಲಿಸೋ ಪುರಂದರ ವಿಠಲನೆ ಚಿಂತಿಪ ಗೌತಮನ ಸತಿಗೆ ಒಲಿದ ದಯದಿಂದಲೆನ್ನ