ಕೀರ್ತನೆ - 356     
 
ಇಂಥ ಹೆಣ್ಣನು ನಾನೆಲ್ಲಿ ಕಾಣೆನೊ | ಹೊಂತಕಾರಿ ಕಾಣಿರೊ ಸಂತತ ಸುರರಿಗೆ ಅಮೃತವನುಣಿಸಿದ ಪಂತಿಯೊಳಗೆ ಪರಪಂತಿಯ ಮಾಡಿದ ಮಂದರಗಿರಿ ತಂದು ಸಿಂಧುವಿನೊಳಗಿಟ್ಟು ಚೆಂದದಿಂದಲಿ ಕಡೆದಮೃತವ ತೆಗೆದು || ಇಂದುಮುಖಿಯೆ ನೀ ಬಡಿಸೆಂದು ಕೊಟ್ಟರೆ | ದಂಧನೆಯನು ಮಾಡಿ ದೈತ್ಯರ ವಂಚಿಸಿದ ವಿಸುವಾಸದಿಂದಲಿ ಅಸುರಗೆ ವರವಿತ್ತು ! ತ್ರಿಶುಲಧರನು ಓಡಿ ಬರುತಿರಲು || ನಸುನಗುತಲಿ ಬಂದು ಭಸುಮಾಸುರನಿಗೆ 1 ವಿಷಯದಾಸೆಯ ತೋರಿ ಭಸುಮವ ಮಾಡಿದ ವಸುಧೆಯೊಳಗೆ ಹೆಣ್ಣು ಒಸಗೆಯಾಗದ ಮುನ್ನ | ಬಸುರಿಲ್ಲದೆ ಬೊಮ್ಮನ ಪಡೆದಿಹಳು || ಕುಸುಮನಾಭ ನಮ್ಮ ಪುರಂದರವಿಠಲನ | ಪೆಸರ ಪೊತ್ತವಳು ಈ ಹೊಸ ಕನ್ನಿಕೆಯು