ಅರಿಯರು ಮನುಜರು ಅರಿತೂ ಅರಿಯರು
ಧರೆಗೆ ಒಡೆಯ ಶ್ರೀ ಹರಿಯಲ್ಲದಿಲ್ಲವೆಂದು
ಶಿವಬಲ್ಲ ಧ್ರುವಬಲ್ಲ ದ್ರೌಪದಿ ಬಲ್ಲಳು
ಅವನಿ ಪಾಲಿಪ ಜನಕನೃಪ ಬಲ್ಲನು ||
ಯುವತಿಗೆ ಶಾಪವಿತ್ತ ಗೌತಮ ಬಲ್ಲನು
ಭವರೋಗ ವೈದ್ಯ ಶ್ರೀಹರಿಯಲ್ಲದಿಲ್ಲವೆಂದು
ನಾರದ ಮುನಿ ಬಲ್ಲ ವಾರಿಜೋದ್ಭವ ಬಲ್ಲ
ಪಾರಾಶರನು ಬಲ್ಲ ಮನು ಬಲ್ಲನು ।।
ಧೀರ ಭೀಷ್ಮನು ಬಲ್ಲ ಪಾರ್ವತಿ ಬಲ್ಲಳು
ಕಾರಣಕರ್ತ ಶ್ರೀಹರಿಯಲ್ಲದಿಲ್ಲವೆಂದು
ದಿಟ್ಟ ಪ್ರಹ್ಲಾದ ಮೊರೆಯಿಟ್ಟ ಗಜೇಂದ್ರ ಬಲ್ಲ
ದೃಷ್ಟಾಂತ ಕಂಡ ಭ್ರಗುಮುನಿ ಬಲ್ಲನು ।।
ಕೊಟ್ಟ ಬಲಿಯು ಬಲ್ಲ ಕೆಟ್ಟಜಾಮಿಳ ಬಲ್ಲ
ಸೃಷ್ಟಿಗೆ ಪುರಂದರವಿಠಲನಲ್ಲದಿಲ್ಲವೆಂದು
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ಪುರಾಣ ಕಥಾನಕಗಳು