ಸಂದಿತಯ್ಯ ಪ್ರಾಯವು |
ಸಂದಿತಯ್ಯ ಪ್ರಾಯವು
ಮೂರು ತಿಂಗಳು
ಸಂದುಹೋಯಿತು ತಿಳಿಯದೆ ||
ಬಂದೆ ತಾಯಿಯ ಜಠರದಲಿ ಮ-1
ತ್ತೊಂದು ಬುದ್ದಿಯನರಿಯದೆ ||
ಬೆಂದೆ ನವಮಾಸದಲಿ ಗರ್ಭದಿ ।
ಒಂದು ದಿವಸವು ತಡೆಯದೆ ||
ಕುಂದದೀಪರಿಯೊಂದು ವರುಷವು |
ಇಂದಿರೇಶನೆ ಕೇಳು ದುಃಖವ
ಕತ್ತಲೆಯೊಳಿರಲಾರೆನೆನುತಲಿ |
ಹೊತ್ತೆ ಹರಕೆಯ ನಿನ್ನನು ||
ಮತ್ತೆ ಜನಿಸಲು ಭೂಮಿಯೊಳು ನಾ |
ಅತ್ತುನಿನ್ನನು ಮರೆತೆನು ||
ಮತ್ತೆ ಮಲ ಮೂತ್ರದೊಳು ಬಾಲ್ಯದಿ |
ಹೊತ್ತು ದಿನಗಳ ಕಳೆದೆನು ||
ಮತ್ತೆ ನರಕದೊಳುರುಳುತುರುಳುತ |
ಉತ್ತಮೋತ್ತಮ ನಿನ್ನ ನೆನೆಯದೆ
ಚಿಕ್ಕತನವನು ಮಕ್ಕಳಾಟದಿ ।
ಅಕ್ಕರಿಂದಲಿ ಕಳೆದೆನು ||
ಸೊಕ್ಕಿ ಹದಿನಾರಲಿ ನಾನತಿ |
ಮಿಕ್ಕಿ ನಡೆದೆನು ನಿನ್ನನು ||
ಸಿಕ್ಕಿ ಬಹು ಸಂಸಾರ ಮಾಯೆಯ |
ಕಕ್ಕುಲತೆಯೊಳು ಬಿದ್ದೆನು |
ಹೊಕ್ಕುದಿಲ್ಲವು ನಿನ್ನ ಪಾದವ ।
ರಕ್ಕಸಾರಿಯೆ ಕೇಳು ದುಃಖವ
ಸುಳಿದೆ ಮನೆಮನೆ ಕಳೆದೆ ಕಾಲವ |
ಉಳಿದ ಯೋಚನೆ ಮಾಡದೆ ||
ಬೆಳೆದೆ ತಾಳೆಯ ಮರದ ತೆರದಲಿ ||
ಉಳಿವ ಬಗೆಯನು ನೋಡದೆ ||
ಎಳೆಯ ಮನದೊಳೆ ಇಳೆಯ ಜನರೊಳು |
ಬಳಕೆ ಮಾತುಗಳಾಡಿದೆ ||
ಕಳೆದೆ ಈ ಪರಿಯಿಂದ ಕಾಲವ |
ನಳಿನನಾಭನೆ ನಿನ್ನ ನೆನೆಯದೆ
ಎಡೆಬಿಡದೆ ಅನುದಿನದಿ ಪಾಪದ ।
ಕಡಲೊಳಗೆ ನಾನಾಳ್ದೆನು
ದರವ ಕಾಣದೆ ಮಧ್ಯದಲಿ ಎ- |
ನ್ನೊಡಲೊಳಗೆ ನಾನೊಂದನು ॥
ದೃಢದಿ ನಿನ್ನಯ ಧ್ಯಾನವೆಂಬಾ ।
ಹಡಗವೇರಿಸು ಎನ್ನನು ||
ಒಡೆಯ ಪುರಂದರವಿಠಲ ಎನ್ನನು |
ಬಿಡದೆ ಕಾಯೈ ಬೇಗ ಶ್ರೀ ಹರಿ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಆತ್ಮ ನಿವೇದನೆ