ಕೀರ್ತನೆ - 339     
 
ಶರಣು ಶರಣು ನಿನಗೆಂಬೆನೊ ವಿಠಲ ಎರವು ಮಾಡದೆಯೆನ್ನ ಕಾಯೊ ವಿಠಲ ಅರಸಿ ರುಕ್ಷ್ಮಿಣಿಗೆ ನೀನೇನೆಂದೆಯೊ ವಿಠಲ ಸರಸಿಜಸಂಭವ ಸನ್ನುತ ವಿಠಲ || ಬಿರುದಿನ ಶಂಖವ ಪಿಡಿದೆಯೊ ವಿಠಲ ಅರಿತು ಇಟ್ಟಿಗೆಯ ಮೇಲೆ ನಿಂತೆಯೊ ವಿಠಲ ಶಶಿಮುಖಿ ಗೋಪಿಯರ ರಾಜನೆ ವಿಠಲ ಕುಶಲದಿ ಗಜುಗವನಾಡಿದೆ ವಿಠಲ || ದಶರಥನಂದನ ರಾಮನೆ ವಿಠಲ ಕುಸುಮ ಬಾಣನಯ್ಯ ಕಾಯೊ ನೀ ವಿಠಲ ಕಂಡೆ ಗೋಪುರದ ವೆಂಕಟನೆ ವಿಠಲ ಅಂಡಜಾಧಿಪ ವಾಹನನೆ ವಿಠಲ ॥ ಪಂಡರಿಕ್ಷೇತ್ರದ ಪಾಲನೆ ವಿಠಲ ಪುಂಡರೀಕ ವರದ ಪುರಂದರ ವಿಠಲ