ವ್ಯಾಪಾರವೆನಗಾಯಿತು
ಶ್ರೀಪತಿಯ ಪಾದಾರವಿಂದ ಸೇವೆಯೆಂಬ
ಪರಿಕರುಣವೆಂಬಂಗಿ ಗುರು ಕರುಣ ಮುಂಡಾಸು
ಹರಿದಾಸರ ದಯವೆಂಬ ವಲ್ಲಿ ||
ಪರಮ ಪಾಪಗಳೆಂಬ ಪಾಪೋಸವನೆ ಮೆಟ್ಟಿ
ದುರುಳಾತ್ಮರಾದವರ ಎದೆ ಮೇಲೆ ನಡೆವಂಥ
ಬಿಳಿಯ ಕಾಗದ ಹೃದಯ ಬಾಯಿ ಕಲಮದಾನಿ
ನಾಲಿಗೆಯೆಂಬ ಲೆಕ್ಕಣಿಕೆ ||
ಶ್ರೀಲೋಲನ ದಿವ್ಯನಾಮವೆಂಬುವ ಲೆಕ್ಕ
ಶೀಲದಿ ಬರೆದು ಶ್ರೀಹರಿಗೆ ಒಪ್ಪಿಸುವಂಥ
ನುಡಿನುಡಿಗಾನಂದಬಾಷ್ಪ ರೋಮಾಂಚನ
ಮುಡುಪಿನೊಳಗೆ ಇಟ್ಟ ಕೈಜೀತವು ।।
ಕಡಿಮೆ ಸಂಬಳಕೆಲ್ಲ ಮುಕ್ತಿಸಾಧನವನ್ನು
ಕೊಡುವ ತೆರನಂತೆ ಚೀಟಿ ಬರೆಸಿಕೊಟ್ಟ
ಹಿಂದಿನ ಸಂಸಾರ ಆಗಮನದ ಭಯ
ಎಂದೆಂದಿಗದರ ಚಿಂತೆಯು ಬಿಟ್ಟಿತು ।।
ಮುಂದಿನ ಸಂಸಾರ ಸ್ಥಾನ ಭಾರಕೆಲ್ಲ
ಸಂದಾಯವನು ಮಾಡಿ ಕತಬಿ ಹರಿಸಿಕೊಟ್ಟ
ಕಂಡಕಂಡವರ ಕಾಲುಗಳಿಗೆರಗಿ ನನ್ನ
ಮಂಡೆ ದಡ್ಡುಗಟ್ಟಿ ಬಳಲಿದೆನೊ ||
ಪುಂಡರೀಕಾಕ್ಷ ಶ್ರೀ ಪುರಂದರ ವಿಠಲನು
ಕಂಡು ವೀಳೆಯ ಕೊಟ್ಟು ತನ್ನ ಸೇವೆಗೆ ಇಟ್ಟ