ಕೀರ್ತನೆ - 329     
 
ಯಾರಲಿ ದೂರುವೆನೋ ಗಿರಿಯ ರಾಯಾ ಯಾರೆನ್ನ ಸಲಹುವರೋ ಸಾರಿದ ಭಕ್ತಸಂಸಾರಿ ನಿನ್ನಯ ಪದ ವಾರಿಜವನು ತೋರೋ ಕಾರುಣ್ಯ ನಿಧಿ ಬೇಗ ಕಷ್ಟಜನ್ಮಕೆ ಬಂದೆನೋ-ಧಾರಿಣಿಯೊಳು ದುಷ್ಟರಿಂದಲಿ ನೊಂದೆನೋ ॥ ನಿಷ್ಠುರ ಬೇಡವೊ ನಿನ್ನ ನಂಬಿದ ಮೇಲೆ ಸೃಷ್ಟಿಗೊಡೆಯ ಎನ್ನ ಬಿಟ್ಟು ಕಳೆಯಬೇಡ ಹಿಂದೆ ಮಾಡಿದ ಕರ್ಮವು ಈ ಭವದೊಳು ಮುಂದಾಗಿ ತೋರುತಿದೆ | ಇಂದೇನು ಗತಿ ಅದರಿಂದ ನೊಂದೆನು ನಾನು ಮಂದರಧರ ಗೋವಿಂದ ನೀನಲ್ಲದೆ ಹಗಲು ಕತ್ತಲೆ ಸುತ್ತಿದೆ ಕಂಗೆಡಿಸುತ ಹಗೆಗಳ ನಗಿಸುತಿದೆ || ಉಗುರಲಿ ಸೀಗೆ ಮುಳ್ಳುಗಳೀಗ ನೆಡುತಿವೆ ಸೊಗವ ಹಾರಿಸಿ ಎದೆ ದಿಗಿಲುಗೊಳಿಸುತಿದೆ ಬಾಡಿದರಳಿಸಸಿಯ ಕಲ್ಲಿನ ಮೇಲೆ ಈಡಾಗಿ ನಾಟಿದರೆ || ಬೇಡಿಕೊಂಡರೆ ತಳಿರು ಮೂಡಿ ಬರುವುದುಂಟೆ ರೂಢಿಗೊಡೆಯ ನೀನು ನೋಡದಿದ್ದ ಮೇಲೆ ಹಲವು ಪರಿಯ ಕಷ್ಟವ ನಿನ್ನಯ ಪಾದ ಜಲಜದ ಕರುಣದಲಿ || ಸುಲಿಗೆಗೊಟ್ಟೆನು ನಾನು ಸೂರೆಗಾರರಿಗೆಲ್ಲ ಒಲವಾಗು ಎನ್ನೊಳು ಪುರಂದರವಿಠಲ