ಕೀರ್ತನೆ - 327     
 
ಮೋಸ ಹೋದೆನಲ್ಲ ಸಕಲವು। ವಾಸುದೇವ ಬಲ್ಲ (ಪ) ಭಾಸುರಾಂಗ ಶ್ರೀ ವಾಸುಕಿಶಯನನ । ಸಾಸಿರ ನಾಮವ ಲೇಸಾಗಿ ಪಠಿಸದೆ (ಅ.ಪ) ದುಷ್ಟಜನರ ಕೂಡಿ ನಾನತಿ । ಭ್ರಷ್ಟನಾದೆ ನೋಡಿ | ಸೃಷ್ಟಿಗೊಡೆಯ ಮುರ-ಮುಷ್ಟಿಕ ವೈರಿಯ | ದೃಷ್ಟಿಯಿಂದ ನಾ ನಿಟ್ಟಿಸಿ ನೋಡದೆ ಕಾಯವು ಸ್ಥಿರವಲ್ಲ-ಎನ್ನೊಳು-| ಮಾಯೆ ತುಂಬಿತಲ್ಲ || ಪ್ರಾಯಮದದಿ ಪರಸ್ತ್ರೀಯರ ಕೂಡುತೆ | ಕಾಯಜಜನಕನ ಧ್ಯಾನವ ಮಾಡದೆ ಕಂಗಳಿಂದಲಿ ನೋಡೊ ದೇವಾ ನಿ । ನ್ನಂಗ ಸಂಗವ ನೀಡೋ ॥ ಮಂಗಳಮಹಿಮ ಶ್ರೀ ಪುರಂದರವಿಠಲ ನಿ-| ನ್ನಂಗದೊಳಿರುವಂತೆ ದಯವನು ಮಾಡೊ