ಕೀರ್ತನೆ - 310     
 
ಪೂರ್ವಜನ್ಮದಲಿ ನಾ ಮಾಡಿದಾ ಭವದಿಂದ ಉರ್ವಿಯೊಳು ಜನಿಸಿದೆನೊ ಕೃಷ್ಣ ಕಾರುಣ್ಯನಿಧಿಯೆನ್ನ ಕಾಯಬೇಕಯ್ಯ ಹರಿ ವಾರಿಜನಾಭನೇ ಮುದ್ದುಕೃಷ್ಣ ಹುಟ್ಟಿದಂದಿಂದಿಗೂ ಸುಖವ ನಾ ಕಾಣದಲೆ ಕಷ್ಟನಾದೆನು ಕೇಳೊ ಕೃಷ್ಣ ತೊಟ್ಟಿಲಿನ ಶಿಶು ತಾಯ ಬಿಟ್ಟ ತೆರನಂತೆ ಕಂ ಗೆಟ್ಟು ಸೊರಗಿದೆನಯ್ಯ ಕೃಷ್ಣ ಮುಟ್ಟಲಮ್ಮರು ಎನ್ನ ಸತಿ ಸುತರು ಬಾಂಧವರು ಅಟ್ಟಿ ಎಳೆಯುತ್ತಿಹರೋ ಕೃಷ್ಣ ಕಷ್ಟ ದಾರಿದ್ರ್ಯವನು ಪರಿಹರಿಸದಿರೆ ದೂರು ಮುಟ್ಟುವುದು ನಿನಗಯ್ಯ ಕೃಷ್ಣ ಕಾಶಿಯಾ ವಾಸವನು ಬಯಸಿ ಬಹುದಿನದಿಂದ ಆಸೆಯೊಳಗಿದ್ದೆನಯ್ಯ ಕೃಷ್ಣ ಗಾಸಿಯನು ಮಾಡದಲೆ ದೋಷವನು ಪರಿಹರಿಸೊ ಸಾಸಿರನಾಮದ ಕೃಷ್ಣ ಹೇಸಿಕೆಯೊಳಿರ್ದ ಸಂಸಾರವೆಂಬುವ ಮಾಯ ಪಾಶದಿಂದಲಿ ಬಿಗಿದರೇ ಕೃಷ್ಣ ಕಂಸಮರ್ದನನೆ ನೀ ಕಾಯಬೇಕಯ್ಯ ಹರಿ ವಾಸುದೇವನೆ ಮುದ್ದು ಕೃಷ್ಣ ಲೋಕದೊಳಗೆನ್ನನು ಪೋಲ್ವ ಪಾಪಿಗಳನ್ನು ನೀ ಕಂಡು ಬಲ್ಲೆಯಾ ಕೃಷ್ಣ ಸಾಕಿನ್ನು ಎನಗೊಂದು ಗತಿಯ ತೋರಿಸಿ ಸದ್ವಿ ವೇಕಿಯನೆ ಮಾಡಯ್ಯ ಕೃಷ್ಣ ರಾಕೇಂದುಮುಖಿ ದ್ರೌಪದಿಯ ಮಾನವ ಕಾಯ್ದೆ ಆಕೆಗಕ್ಷಯವಿತ್ತೆ ಕೃಷ್ಣ ಪಿ ನಾಕಿ ಸಖ ಪುರಂದರ ವಿಠಲನೆ ಉಡುಪಿಯ ವಾಸ ಸಾಕಿ ಸಲಹೈ ಎನ್ನ ಕೃಷ್ಣ