ನಿನ್ನ ದಿವ್ಯ ಮೂರುತಿಯ ಕಣ್ಣದಣಿಯಲು ನೋಡಿ
ಧನ್ಯನಾದೆನು ಧರೆಯೊಳು ||
ಇನ್ನು ಈ ಭವಭಯಕೆ ಅಂಜಲೇತಕೆ ದೇವ
ಚೆನ್ನ ಶ್ರೀ ವೆಂಕಟೇಶಾ ಈಶಾ
ಏಸು ಜನುಮದ ಸುಕೃತ ಫಲವು ಬಂದೊದಗಿತೋ
ಈ ಸ್ವಾಮಿ ಪುಷ್ಕರಣಿಯೊಳ್
ನಾ ಸ್ನಾನವನು ಮಾಡಿ ವರಾಹ ದೇವರ ನೋಡಿ
ಶ್ರೀ ಸ್ವಾಮಿ ಮಹಾದ್ವಾರಕೆ
ಈ ಶರೀರವನು ಈಡಾಡಿ ಪ್ರದಕ್ಷಿಣೆ ಮಾಡಿ
ಲೇಸಿನಿಂದಲಿ ಪೊಗಳುತ
ಆ ಸುವರ್ಣದ ಗರುಡಗಂಬವನು ಸುತ್ತಿ ಸಂ
ತೋಷದಿಂ ಕೊಂಡಾಡಿದೆ ಬಿಡದೆ
ನೆಟ್ಟನೆಯೆ ದ್ವಾರವ ದಾಟಿ ಪೋಗುತಲಿರಲು
ದಟ್ಟಣೆಯ ಮಹಾಜನದೊಳು
ಕೃಷ್ಣಾಜಿನದವರ ಕೈ ಪೆಟ್ಟು ಕಾಣುತ್ತ ಕಂ
ಗೆಟ್ಟು ಹರಿಹರಿಯೆನುತಲಿ
ಗಟ್ಟಿ ಮನಸಿನಲಿ ತಲೆಚಿಟ್ಟಿಟ್ಟು ಶೀಘ್ರದಲಿ
ಕಟ್ಟಂಜನಕೆ ಪೋಗುತ
ಬೆಟ್ಟದಧಿಪತಿ ನಿನ್ನ ದೃಷ್ಟಿಯಿಂದಲಿ ನೋಡೆ
ಸುಟ್ಟೆ ಎನ್ನಯ ದುರಿತವಾ-ದೇವಾ
ಶಿರದಲಿ ರವಿಕೋಟಿ ತೇಜದಿಂದೆಸೆಯುವ
ಕಿರೀಟ ವರ ಕುಂಡಲಗಳ
ಕೊರಳಲ್ಲಿ ಸರ ವೈಜಯಂತಿ ವನಮಾಲೆಯನು
ಪರಿಪರಿಯ ಹಾರಗಳನು
ಉರದಿ ಶ್ರೀವತ್ಸವನು ಕರದಿ ಶಂಖ-ಚಕ್ರಗಳ
ವರನಾಭಿಮಾಣಿಕವನು
ನಿರುಪ ಮಣಿಖಚಿತ ಕಟಿಸೂತ್ರ ಪೀತಾಂಬರವ
ಚರಣಯುಗದಂದುಗೆಯನು - ಇನ್ನು
ಇಕ್ಷುಚಾಪನ ಪಿತನೆ ಪಕ್ಷೀಂದ್ರವಾಹನನೆ
ಲಕ್ಷ್ಮೀಪತಿ ಕಮಲಾಕ್ಷನೆ
ಅಕ್ಷತ್ರಯ ಅಜ ಸುರೇಂದ್ರಾದಿವಂದಿತನೆ
ಸಾಕ್ಷಾಜ್ಜಗನ್ನಾಥನೇ
ರಾಕ್ಷಸಾಂತಕ ಭಕ್ತವತ್ಸಲ ಕೃಪಾಳು ನಿರ
ಪೇಕ್ಷ ನಿತ್ಯತೃಪ್ತನೇ
ಕುಕ್ಷಿಯೊಳಗಿರೇಳು ಭುವನವನು ಪಾಲಿಪನೆ
ರಕ್ಷಿಸುವುದೊಳಿತು ದಯದಿ ಮುದದಿ
ಉರಗಗಿರಿಯರಸ ನಿನ್ನ ಚರಣ ನೋಡಿದ ಮೇಲೆ
ಉರಗ ಕರಿ ವ್ಯಾಘ್ರ ಸಿಂಹ
ಅರಸು ಜೋರಾಗ್ನಿ ವೃಶ್ಚಿಕ ಕರಡಿ ಮೊದಲಾದ
ಪರಿಪರಿಯ ಭಯಗಳುಂಟೇ
ಪರಮ ವಿಷಯಗಳ ಲಂಪಟದೊಳಗೆ
ಕರುಣಿಸುವುದೊಳಿತು ದಯವಾ
ಸ್ಮರಗಧಿಕ ಲಾವಣ್ಯ ಪುರಂದರ ವಿಠಲನೇ
ಶರಣಜನ ಕರುಣಾರ್ಣವಾ ದೇವಾ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಆತ್ಮ ನಿವೇದನೆ