ನಿನ್ನ ನಂಬಿದೆನೊ ನೀಯೆನ್ನ ಸಲಹಯ್ಯ
ಎನ್ನ ಗುಣದೋಷಗಳ ಎಣಿಸಬೇಡಯ್ಯ
ಬಾಲ್ಯದಲಿ ಕೆಲವು ದಿನ ಬರಿದೆ ಹೋಯಿತು ಹೊತ್ತು
ಮೇಲೆ ಯೌವನಮದದಿ ಮುಂದರಿಯದೆ ||
ಸ್ಥೂಲ ಸಂಸಾರದಲಿ ಸಿಲುಕಿ ಬಳಲಿದೆ ನಾನು
ಪಾಲಿಸೈ ಪರಮಾತ್ಮ ಭಕುತಿಯನು ಕೊಟ್ಟು
ಆಸೆಯೆಂಬುದು ಅಜನ ಲೋಕ ಮುಟ್ಟುತಲಿದೆ
ಬೇಸರದೆ ಸ್ತ್ರೀಯರಲಿ ಬುದ್ಧಿಯೆನಗೆ ।
ವಾಸುದೇವನೆ ನಿನ್ನ ಪೂಜೆಗೆಯ್ದವನಲ್ಲ
ಕೇಶವನೆ ಕ್ಲೇಶವನು ನಾಶ ಮಾಡಯ್ಯ
ಈ ತೆರದಿ ಕಾಲವನು ಕಳೆದೆ ನಾನಿಂದಿರೇಶ
ಭೀತಿ ಮೋಹದಿ ಜ್ಞಾನರಹಿತನಾದೆ ॥
ಮಾತೆ ಶಿಶುವನು ಕರೆದು ಮನ್ನಿಸುವ ತೆರನಂತೆ
ದಾತ ಶ್ರೀ ಪುರಂದರ ವಿಠಲ ದಯಮಾಡೈ