ಕೀರ್ತನೆ - 297     
 
ನಿನ್ನ ನಂಬಿದೆ ನೀರಜನಯನ ಎನ್ನ ಪಾಲಿಸೊ ಇಂದಿರೆ ರಮಣ ಮುನ್ನ ಪಾಂಚಾಲಿಯ ಮೊರೆಯ ಲಾಲಿಸಿ ಕಾಯ್ದ ಪನ್ನಗಶಯನ ನೀ ಪರಮಪುರುಷನೆಂದು ಹರಿಸರ್ವೋತ್ತಮನಹುದೆಂಬ ಬಾಲಕನ ಹಿರಣ್ಯಕಶಿವು ಪಿಡಿದು ಬಾಧಿಸಲು | ನರಹರಿ ರೂಪಿಂದಲವನ ವೃಕ್ಷವ ಸೀಳೆ ಪರಮ ವಿಶ್ವಾತ್ಮಕನಹುದೆಂದು ಮರೆ ಹೊಕ್ಕೆ ಪಾದವ ಪಿಡಿದು ನೀರೊಳಗೆಳೆದ ನಕ್ರನ ಬಾಧೆಗಾರದೆ ಕರಿಮೊರೆಯಿಡಲು || ಆದಿ ಮೂರುತಿ ಚಕ್ರದಿಂದ ನಕ್ರನ ಕೊಂದ ವೇದಾಂತವೇದ್ಯ ಅನಾಥ ರಕ್ಷಕನೆಂದು ಇಳೆಗೊಡೆಯನ ತೊಡೆ ನಿನಗೇತಕೆಂದು ಆ ಲಲನೆ ಕೈ ಪಿಡಿದೆಳೆಯಲರ್ಭಕನ ॥ ನಳಿನಾಕ್ಷ ನಿನ್ನನೆದೆಯೊಳಿಟ್ಟು ತಪವಿರ್ದ ಬಲು ಬಾಲಕಗೆ ಧ್ರುವಪಟ್ಟಿಗಟ್ಟಿದನೆಂದು ಸುದತಿ ಗೌತಮಸತಿ ಮುನಿಶಾಪದಿಂದಲಿ ಪಥದಿ ಪಾಷಾಣವಾಗಿ ಬಿದ್ದಿರಲು || ಮುದದಿಂದಲಾಕೆಯ ಮುಕ್ತ ಮಾಡಿದ ಯೋಗಿ ಹೃದಯ ಭೂಷಣ ನಿನ್ನ ಪದವೈಭವವ ಕಂಡು ಪರಮಪಾವನೆ ಜಗದೇಕಮಾತೆಯನು ದುರುಳ ರಾವಣ ಪಿಡಿದು ಕೊಂಡೊಯ್ಯಲು ॥ ಶರಣೆಂದು ವಿಭೀಷಣ ಚರಣಕೆರಗಲಾಗಿ ಸ್ಥಿರಪಟ್ಟವನು ಕೊಟ್ಟ ಜಗದೀಶ ನೀನೆಂದು ಅಂಬರೀಷನೆಂಬ ನೃಪತಿ ದ್ವಾದಶಿಯನು ಸಂಭ್ರಮದಿಂದ ಸಾಧಿಸುತಿರಲು || ಡೊಂಬೆಯಿಂದ ದೂರ್ವಾಸ ಶಪಿಸಲಾಗಿ ಬೆಂಬಿಡದಲೆ ಚಕ್ರದಿಂದ ಕಾಯ್ದವನೆಂದು ಧರೆಯೊಳು ನಿಮ್ಮ ಮಹಿಮೆಯ ಪೊಗಳ್ವಡೆ ಸರಸಿಜೋದ್ಭವ-ಶೇಷಗಸದಳವು ।। ಸ್ಮರಣೆಮಾತ್ರದಿ ಅಜಾಮಿಳಗೆ ಮೋಕ್ಷವನಿತ್ತ ಪುರಂದರ ವಿಠಲ ಜಗದೀಶ ನೀನೆಂದು