ಕೀರ್ತನೆ - 296     
 
ನಾರಾಯಣ ನಿನ್ನ ನಾಮದ ಸ್ಮರಣೆಯ | ಸಾರಾಮೃತವೆನ್ನ ನಾಲಿಗೆಗೆ ಬರಲಿ. ಕೂಡುವಾಗಲು ನಿಂತಾಡುವಾಗಲು ಮತ್ತೆ । ಹಾಡುವಾಗಲು ಹರಿದಾಡುವಾಗ ॥ ಖೋಡಿ ವಿನೋದದಿ ನೋಡದೆ ನಾ ಬಲು | ಮಾಡಿದ ಪಾಪ ಬಿಟ್ಟೋಡಿ ಹೋಗುವ ಹಾಗೆ ಊರಿಗೆ ಹೋಗಲಿ ಊರೊಳಗಿರಲಿ- | ಕಾರಾಣಾರ್ಥಗಳೆಲ್ಲ ಕಾದಿರಲಿ || ವಾರಿಜನಾಭ ನರ ಸಾರಥಿ ಸನ್ನುತ | ಸಾರಿಸಾರಿಗೆ ನಾ ಬೇಸರಿಸದ ಹಾಗೆ ಹಸಿವು ಇದ್ದಾಗಲಿ ಹಸಿವಿಲ್ಲದಾಗಲಿ । ರಸ-ಕಸಿಯಿರಲಿ ಹರುಷವಿರಲಿ || ವಸುದೇವಾತ್ಮಜ ಶಿಶುಪಾಲಕ್ಷಯ ॥ ಅಸುರಾಂತಕ ನಿನ್ನ ಹೆಸರು ಮರೆಯದಂತೆ ಕಷ್ಟದಲ್ಲಿರಲಿ ಉತ್ಕೃಷ್ಟದಲ್ಲಿರಲಿ- | ಎಷ್ಟಾದರು ಮತಿಗೆಟ್ಟಿರಲಿ | ಕೃಷ್ಣ ಕೃಷ್ಣ ಎಂದು ಶಿಷ್ಟರು ಪೇಳುವ | ಅಷ್ಟಾಕ್ಷರ ಮಹಾಮಂತ್ರದ ನಾಮದ ಕನಸಿನೊಳಾಗಲಿ ಕಳವಳಿಸಾಗಲಿ | ಮನಸುಗೊಟ್ಟಿರಲಿ ಮುನಿದಿರಲಿ || ಜನಕಜಾಪತಿ ನಿನ್ನ ಚರಣಕಮಲವನು | ಮನಸಿನೊಳಗೆ ಒಮ್ಮೆ ನೆನೆಸಿಕೊಳ್ಳುವ ಹಾಗೆ ಜ್ವರ ಬಂದಾಗಲು ಚಳಿ ಬಂದಾಗಲು | ಮರಳಿ ಮರಳಿ ಮತ್ತೆ ನಡೆವಾಗಲು ॥ ಹರಿನಾರಾಯಣ ದುರಿತ ನಿವಾರಣ | ಇರುಳು ಹಗಲು ನಿನ್ನ ಸ್ಮರಣೆ ಮರೆಯದಂತೆ ಸಂತತ ಹರಿ ನಿನ್ನ ಸಾಸಿರನಾಮವ | ಅಂತರಂಗದಾ ಒಳಗಿರಿಸಿ || ಎಂತೋ ಪುರಂದರವಿಠಲರಾಯನೆ | ಅಂತ್ಯಕಾಲದಲಿ ಚಿಂತಿಸುವಂತೆ