ತೇಲಿಸೊ ಇಲ್ಲ ಮುಳುಗಿಸೊ ನಿನ್ನ |
ಪಾಲಿಗೆ ಬಿದ್ದೆನೊ ಪರಮ ದಯಾಳೊ
ಸತಿ ಸುತ ಧನದಾಶೆ ಎಂತೆಂಬ ಮೋಹದಿ ।
ಹಿತದಿಂದ ಅತಿನೊಂದು ಬಳಲಿದೆನೊ |
ಗತಿಯನೀವರ ಕಾಣೆ ಮೊರೆಯ ಲಾಲಿಸೊ ಲಕ್ಷ್ಮೀ-।
ಪತಿ ನಿನ್ನ ಚರಣದ ಸ್ಮರಣೆಯಿತ್ತೆನ್ನ
ಜರೆ ರೋಗ ದಾರಿದ್ರ್ಯ ಕಶ್ಮಲವೆಂತೆಂಬ |
ಶರಧಿಯೊಳಗೆ ಬಿದ್ದು ಮುಳುಗಿದೆನೊ ||
ಸ್ಥಿರವಲ್ಲ ಈ ದೇಹ ನೆರೆನಂಬಿದೆನು ನಿನ್ನ ।
ಕರುಣಾಭಯವನಿತ್ತು ಪಾಲಿಸೊ ಹರಿಯೆ
ದೋಷವುಳ್ಳವ ನಾನು ಭಾಷೆಯುಳ್ಳವ ನೀನು |
ಮೋಸ ಹೋದೆನೊ ಭಕ್ತಿರಸವ ಬಿಟ್ಟು ॥
ಶೇಷಶಯನ ಶ್ರೀ ಪುರಂದರ ವಿಠಲನೆ |
ದಾಸರ ಸಂಗವಿತ್ತು ಪಾಲಿಸೊ ಹರಿಯೆ