ತಪ್ಪುಗಳನೆಲ್ಲ ನೀನೊಪ್ಪಿಕೊಳ್ಳೋ - ನ-1
ಮ್ಮಪ್ಪ ಕಾಯಬೇಕು ತಿಮ್ಮಪ್ಪ ನೀನೆ
ಸತಿ ಸುತ ಸಂಸಾರಗಳಿಗೆ |
ಮತಿಹೀನನಾದೆನು ವ್ಯರ್ಥ ||
ಮಿತಿಗಾಣೆನಯ್ಯ ಎನ್ನ ಪಾಪಗಳಿಗೆ
ಗತಿಯದಾವುದು ಪೇಳೊ ಮುಂದೆನಗೆ
ಬಿಸಿಲು ಬಿರುಮಳೆ ಗಾಳಿಯೊಳಗೆ-ಬಲು-|
ದೆಸೆಗೆಟ್ಟು ದೇವ ತಿರುಗಿದೆ ||
ಹಸಿವು-ತೃಷೆಗಳು ಬಹು ಬಾಧಿಸಲು |
ಹುಸಿಯಾಡಿದೆನಯ್ಯ ಹುಟ್ಟು ಮೊದಲು
ಸ್ನಾನ ಸಂಧ್ಯಾವಂದನವರಿಯೆ ನಾನಾ ।
ದಾನ ಧರ್ಮದ ಗುರುತುತಿಳಿಯೆ ||
ಹೀನಜನರ ಸಂಗವ ಮರೆಯೆ ಸು-|
ಜ್ಞಾನಿಗಳನು ಬಾಯೆಂದು ಕರೆಯೆ
ಗಂಗೆ ಅಗ್ರೋದಕಗಳ ತಂದು ನಾ |
ಮಂಗಳ ಮಜ್ಜನ ಮಾಡಲಿಲ್ಲವೆಂದೂ ॥
ಹೊಂಗೇದಗೆ ಪುಷ್ಪವನೊಂದು ಶ್ರೀ- |
ರಂಗಗರ್ಪಿಸಲಿಲ್ಲ ಕಾಯೊ ಬಂದು
ಪೀತಾಂಬರದಿ ವಸ್ತ್ರಗಳಿಂದ ದಿವ್ಯ |
ನೂತನವಾದ ಆಭರಣದಿಂದ ||
ಪ್ರೀತಿಪಡಿಸಲಿಲ್ಲಾದರದಿಂದ ಹೇ-|
ಸೀತಾಪತೆ ಕೃಷ್ಣ ಹರಿಮುಕುಂದ
ಗಂಧಾಕ್ಷತೆ ಪುಷ್ಪಗಳಿಂದ ಬರಿ |
ಒಂದು ದಳ ಶ್ರೀ ತುಳಸಿಯಿಂದ
ಇಂದಿರೇಶನ ಅರ್ಚಿಸದರಿಂದ ಬಹು |
ನೊಂದು ದೂರಾದೆ ಸದ್ಗತಿಯಿಂದ
ಏಕಾರತಿ ಧೂಪಾರತಿಯ ಎಂದು ।
ಶ್ರೀಕಾಂತ ನಿನಗೆ ನಾ ಮಾಡಲಿಲ್ಲ ॥
ವ್ಯಾಕುಲದಲಿ ಹೋಯಿತು ಹೊತ್ತು ಬಂದು -|
ನೀ ಕರುಣಿಸು ಲಕ್ಷ್ಮೀರಮಣ
ಪಾಯಸ ಪಂಚಭಕ್ಷ್ಯಗಳಿಂದ ಬಲು-|
ಆಯತವಾದ ಶಾಕಗಳಿಂದ |
ತೋವೆ ಶಾಲ್ಯನ್ನ ಸದ್ಘೃತದಿಂದ ಶ್ರೀ - |
ಮಾಯಾಪತಿಗೆ ಅರ್ಪಿಸಲಿಲ್ಲ.
ಮಂಗಳಾರತಿಯ ನಾ ಮಾಡಲಿಲ್ಲ ಜಯ-1
ಮಂಗಳವೆನ್ನುತ ಪಾಡಲಿಲ್ಲ ||
ಕಂಗಳ ನೋಟದಿ ನೋಡಲಿಲ್ಲ ನರ-
ಸಿಂಗ ನೀ ಬಾಯೆಂದು ಕರೆಯಲಿಲ್ಲ.
ಹರಿಯ ಪಾದಕೆ ಬಿದ್ದವನಲ್ಲ ನರ-|
ಹರಿಗೆ ಪ್ರದಕ್ಷಿಣೆ ಮಾಡಲಿಲ್ಲ |
ಹರಿದಿನದುಪವಾಸ ವ್ರತವು ಇಲ್ಲ ಬಲು |
ಹರಿಯ ದಾಸರ ಸಂಗ ಎನಗಿಲ್ಲ
ಹೋಮಾರ್ಚನೆ ಔಪಾಸನವೆಲ್ಲ ।
ನೇಮದಿಂದಲಿ ನಾ ಮಾಡಲಿಲ್ಲ |
ಕಾಮಾತುರನಾಗಿ ಕಂಡಕಂಡ ಕಡೆ |
ಸ್ವಾಮಿಯ ಕಾಣದೆ ತಿರುಗಿದೆನೊ
ಅತಿಥಿಗಳ್ ಬಂದರೆ ಮನೆಗೆ ಅಂದೆ |
ಗತಿಯಿಲ್ಲವಯ್ಯ ಕೊಡುವುದಕೆ ॥
ಯತಿಯ ಕಂಡರೆ ನಿಂದಿಸಿದೆ ಶ್ರೀ |
ರತಿಪತಿ ಪಿತ ನೀ ದಯ ಮಾಡೊ
ಎಷ್ಟು ಹೇಳಲಿ ಎನ್ನವಗುಣವ ಅವು |
ಅಷ್ಟು ಇಷ್ಟೆಂದು ಎಣಿಕೆಯಿಲ್ಲ |
ದೃಷ್ಟಿಯಿಂದ ನೋಡಿ ದಯ ಮಾಡೊ ಶ್ರೀ ।
ಬೆಟ್ಟದ ವೆಂಕಟ ಪುರಂದರವಿಠಲ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಆತ್ಮ ನಿವೇದನೆ