ಕೆಟ್ಟೆನಲ್ಲೊ ಹರಿಯೆ |
ಸಿಟ್ಟು ಮಾಡಿ ಎನ್ನ ಬಿಟ್ಟು ಕಳೆಯ ಬೇಡ
ಬಂದೆನು ನಾ ತಂದೆ ತಾಯಿಗಳುದರದಿ |
ಒಂದನೂ ಅರಿಯದೆ ಬಾಲಕತನದೊಳು ||
ಮುಂದುವರಿದ ಯೌವನದೊಳು ಸತಿ ಸುತ-|
ರಂದವ ನೋಡುತ ನಿನ್ನ ನಾ ಮರೆತೆನೊ
ಸ್ನಾನ ಸಂಧ್ಯಾನವು ಹೀನವಾಯಿತು ಬಹು-|
ಮಾನವಿಲ್ಲದೆ ಕುಲಹೀನರಾಶ್ರಯದಿಂದ ||
ಜ್ಞಾನಿಗಳೊಡನಾಟವಿಲ್ಲದೆ ಮನದೊಳು |
ದಾನ-ಧರ್ಮದ ಬಟ್ಟೆಯೆಂತೆಂದು ಮರೆತನು
ಮೊದಲೆ ಬುದ್ಧಿಯು ಹೀನ ಅದರೊಳು ವೃದ್ಧಾಪ್ಯ |
ಕದನವು ದಶದಿಕ್ಕಿನುದಯದ ರಾಯರ ॥
ಎದೆನೀರು ಬತ್ತಿತು ಅದರಿಂದ ನಿನ್ನಯ |
ಪದಪದ್ಮಯುಗಳದ ತುದಿಯ ನಾ ಮರೆತೆನು
ಮೂಢನಾದೆನು ನಿನ್ನ ಬೇಡಿಕೊಳ್ಳದೆ ನಾನು |
ಕಾಡೊಳಗಾಡುವ ಮೃಗದಂತೆ ಜೀವಿಸಿ |
ಗೂಡೊಳಗಿರುತಿಹ ಗೂಬೆಯ ತೆರನಂತೆ ।
ಮಾಡದೆ ನಿನ್ನಯ ಸ್ಮರಣೆಯ ಮರೆತೆನು
ಬುದ್ಧಿಹೀನನು ನಾನು ಉದ್ಧರಿಸೆಲೊ ದೇವ |
ಮುದ್ದು ಶ್ರೀ ಪುರಂದರ ವಿಠಲನೆನ್ನ |
ಬುದ್ಧಿಯೊಳಡಗಿಯೆ ತಿದ್ದಿಟ್ಟು ನಡೆಸಯ್ಯ ।
ಪೊದ್ದುವೆ ನಿನ್ನಯ ಚರಣಾರವಿಂದವ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಆತ್ಮ ನಿವೇದನೆ