ಕೀರ್ತನೆ - 255     
 
ಕಂಡು ಕಂಡೆಂತು ಕೈ ಬಿಡುವೆ ಹರಿಯೆ । ಪುಂಡರೀಕಾಕ್ಷ ನಿನ್ನ ನಂಬಿದ ಮೇಲೆ ಕ್ಷಣವೊಂದು ಯುಗವಾಗಿ ತೃಣಕಿಂತ ಕಡೆಯಾಗಿ । ಬಣಗುದಾರಿದ್ರ್ಯದಲಿ ಬಲು ನೊಂದೆನಯ್ಯ || ಫಣಿಶಾಯಿ ಪ್ರಹ್ಲಾದವರದನೇ ನೀನೆನಗೆ । ಹೊಣೆಯಾದ ಮೇಲಿನ್ನು ಮರುಳು ಗೊಳಿಸುವರೆ? ಒಂದು ದಿನ ಅತಿಥಿಗಳನುಪಚರಿಸಿದವನಲ್ಲ | ಬೆಂದೊಡಲ ಹೊರೆದು ಬೇಸತ್ತೆನಯ್ಯ || ಕುಂದು-ಕೊರತೆಯು ಏಕೆ ? ನಿನ್ನ ನಂಬಿದೆ ದಯಾ- | ಸಿಂಧು ಗೋವಿಂದನೇ ತಂದೆಯಾದ ಮೇಲೆ ಬಂಧು ಬಳಗ ಮುನ್ನಿಲ್ಲ ಬದುಕಿನಲ್ಲಿ ಸಖವಿಲ್ಲ । ನಿಂದ ನೆಲ ಮುನಿಯುತಿದೆ ನೀರಜಾಕ್ಷ ॥ ತಂದೆ-ತಾಯಿಯು ನೀನೆ ಬಂಧು ಬಳಗವು ನೀನೆ | ಕುಂದದೇ ರಕ್ಷಿಸೈ ನಂದನಂದನನೆ ಆಶೆಯನು ಬಿಡಲಿಲ್ಲ ಅತಿ ಹರುಷವೆನಗಿಲ್ಲ | ದೇಶದೇಶವ ತಿರುಗಿ ದೆಸೆಗೆಟ್ಟೆನಯ್ಯ ॥ ವಾಸವಾರ್ಚಿತನಾದ ವೈಕುಂಠನಿಲಯ ಲ-| ಕ್ಲ್ಮೀಶ ನೀಯೆನ್ನ ಕಣ್ಣಾರೆ ಕಂಡ ಮೇಲೆ ಭಕುತವತ್ಸಲನೆಂಬ ಬಿರುದು ಹೊತ್ತಿದ ಮೇಲೆ | ಭಕುತರಾಧೀನನಾಗಿರ ಬೇಡವೆ ॥ ಮುಕುತಿದಾಯಕನೆ ಬೇಲೂರು ಪುರಾಧೀಶ್ವರ | ಸಕಲ ದೇವರದೇವ ಪುರಂದರ ವಿಠಲ