ಕೀರ್ತನೆ - 246     
 
ಏಕೆನ್ನೊಳಿಂತು ಕೃಪೆಯಿಲ್ಲ ಹರಿಯೆ ಕಾಕುಮಾಡದೆ ಕಾಯೊ ಸಂಗದೊಳು ಬಳಲಿದೆನು ಕಂದರ್ಪ ಬಾಧೆಯಿಂ ಮಾನಿನಿಯ ವಶನಾಗಿ ಮಂದಮತಿಯಿಂದ ನಾ ಮರುಳಾದೆನೋ || ಸಂದಿತೈ ಯೌವನವು ಬುದ್ದಿ ಬಂದಿತು ಈಗ ಸಂದೇಹಪಡದೆ ನೀ ಕರುಣಿಸೈ ಎನ್ನ ಹೆಂಡತಿಯು ಕಡೆಗಣ್ಣಿನಿಂದ ನೋಡುವಳೀಗ ಹಿಂಡು ಮಕ್ಕಳು ಎನ್ನ ತಿನ್ನುತಿಹರು || ಮುಂಡಮೋಚಿದೆ ನಾನು ಇನ್ನಾರು ಗತಿಯೆನಗೆ ಪುಂಡರೀಕಾಕ್ಷ ನೀ ಪಾಲಿಸೈ ಎನ್ನ ಅಟ್ಟಮೇಲೊಲೆಯುರಿಯುವಂತೆ ಹರಿ ಎನಗೀಗ ಕೆಟ್ಟ ಮೇಲರಿವು ತಾ ಬಂದಿತಯ್ಯ ॥ ನೆಟ್ಟನೇ ಪುರಂದರ ವಿಠಲನೆ ಕೈ ಬಿಡದೆ ದಿಟ್ಟಿಯಲಿ ನೋಡಿ ಪರಿಪಾಲಿಸೈ ಎನ್ನ