ಎನ್ನ ಮನದ ಡೊಂಕ ತಿದ್ದಿ-
ಚರಣದಲ್ಲಿ ಸೇರಿಸೋ |
ನಿನ್ನ ಸೇವಕನಾದ ಮೇಲೆ
ಇನ್ನು ಸಂಶಯವೇಕೆ ಕೃಷ್ಣ
ಉದಯವಾದರೆ ಊಟದ ಚಿಂತೆ ಅದರ ಮೇಲೆ ಭೋಗದ ಚಿಂತೆ |
ಹದಿನಾಲ್ಕು ಲೋಕಂಗಳನಾಳಬೇಕೆಂಬ ಚಿಂತೆ ॥
ಇದು ಪುಣ್ಯ ಪಾಪವೆಂದು ಹೃದಯದಲಿ ಭಯವಿಲ್ಲದಲೆ |
ಮದ ಮೋಹಿತನಾದೆ ನಿನ್ನ ಪದವ ನಂಬದೆ-ದಯಾಳೊ
ನೆರೆಮನೆಗಳ ಭಾಗ್ಯವ ನೋಡಿ ತರಹರಿಸುತ ಅಸೊಯೆಯಿಂದ |
ಹರಿಯ ಸ್ಮರಣೆಗೆ ವಿಮುಖನಾದೆ ನರರಸ್ತುತಿಯ ನಾ ಮಾಡಿದೆ ||
ಪರರ ಸತಿಗೆ ಪರರನ್ನಕೆ ತಿರುಗಿ ತಿರುಗಿ ಚಪಲನು ಆದೆ ।
ಗುರುಹಿರಿಯರ ದೂಷಿಸುತಲಿ ಮರುಳನಾದೆ ದೀನಶರಣ್ಯ
ಅಗಣಿತ ಸುಖ ಬಂದರೆ ನಾನು-
ಗಣಿತ ದುಃಖಕೆ ಹರಿಯೆನ್ನುವೆನು |
ಜಗದೊಳಾವ ಲಾಭವು ಬಂದರು ಧನಿಯು ನಾನೆ ಎಂಬೆ ॥
ಮಿಗೆ ಹಾನಿಗೆ ಹರಿಯನು ದೂಷಿಸಿ
ನೆಗೆದು ಪತಂಗವು ಕಿಚ್ಚಲಿ ಬೀಳುವ |
ಬಗೆ ನಾನಾದೆನು ಪುರಂದರ ವಿಠಲನ ಖಗರಾಜ
ಸುವಾಹನ ಶ್ರೀ ಕೃಷ್ಣ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಆತ್ಮ ನಿವೇದನೆ