ಎಂದಿಗೆ ನಾನಿನ್ನು ಧನ್ಯನಹೆನೊ
ಎಂದಿಗೆ ನಿನ್ನ ಚಿತ್ತಕೆ ಬಹೆನೊ ಅಚ್ಯುತನೆ
ಪುಲು ಮರವು ಗಿಡ ಬಳ್ಳಿ ಕುಲದಲಿಪ್ಪತ್ತು ಲಕ್ಷ
ಜಲ ಜೀವದೊಳಗೆ ಒಂಬತ್ತು ಲಕ್ಷ ॥
ಅಳಲಿ ಏಕಾದಶ ಲಕ್ಷ ಕ್ರಿಮಿ ಕೀಟದಲಿ
ತೊಳಲಿ ಬಳಲಿದೆನಂಡಜದೊಳು ದಶಲಕ್ಷ
ಚರಣ ನಾಲ್ಕರಲಿ ಮೂವತ್ತು ಲಕ್ಷ ಜೀವಿಸಿ.
ನರನಾಗಿ ಚರಿಸಿದೆನು ನಾಲ್ಕು ಲಕ್ಷ |
ಪರಿಪರಿಯ ಭವದಿಂದ ಬಲು ನೊಂದೆನೈ ನಿನ್ನ
ಸರಸಿಜಸಂಭವನ ಕಲ್ಪದಲ್ಲಿ
ಎಂಬತ್ತುನಾಲಕುಲಕ್ಷ ಯೋನಿಗಳಲ್ಲಿ
ಅಂಬುಜನಾಭ ನಿನ್ನ ಲೀಲೆಗಾಗಿ ॥
ಕುಂಭಿನಿಯೊಳು ಬಂದು ನೊಂದೆನಯ್ಯಾ ಸ್ವಾಮಿ
ಕಂಬುಕಂಧರ ಸಿರಿ ಪುರಂದರ ವಿಠಲ