ಅಂದಿಂದ ನಾ ನಿನ್ನ ನೆರೆ ನಂಬಿದೆನೊ ಕೃಷ್ಣ
ತಂದೆ ಗೋವಿಂದ ಮುಕುಂದ ನಂದನ ಕಂದ
ಬಲವಂತ ಉತ್ತಾನಪಾದರಾಯನ ಕಂದ
ಮಲತಾಯಿ ನೂಕಲು ಅಡವಿಯೊಳು |
ಜಲಜಾಕ್ಷ ನಿನ್ನ ಧ್ಯಾನದಿ ತಪವಿರಲಾಗಿ
ಒಂದು ಧ್ರುವಗೆ ಪಟ್ಟಕಟ್ಟಿದ್ದ ಕೇಳಿ
ನಕ್ರನಿಗೆ ಗಜರಾಜ ಸಿಕ್ಕಿ ಸರಸಿಯೊಳು
ದುಃಖದಿ ಶ್ರೀಹರಿ ಸಲಹೆನ್ನಲು |
ಚಕ್ರದಿ ನೆಗಳ ಕಂಠವ ತರಿದು ಭಕ್ತನ
ಅಕ್ಕಸ ಪರಿದಾದಿಮೂಲನೆಂಬುದ ಕೇಳಿ
ದ್ರುಪದನ ಸುತೆಯ ದುಶ್ಯಾಸನ ಸಭೆಯೊಳು
ಕಪಟದಿ ಸೀರೆಯ ಸೆಳೆಯುತಿರೆ ॥
ಸುಪರ್ಣವಾಹನ ಕೃಷ್ಣ ಸಲಹೆಂಬಬಲೆಯನು
ಅಪಮಾನದಿಂದ ಕಾಯ್ದ ಹರಿಯೆಂಬುದನು ಕೇಳಿ
ಹರಿನಾರಾಯಣನೆಂದು ಪ್ರಹ್ಲಾದ ಬರೆಯಲು
ದುರುಳ ದಾನವ ಅವನಿಗೆ ಮುನಿದು ||
ಕರೆ ನಿನ್ನ ಒಡೆಯನ ಎಂದು ಗರ್ಜಿಸೆ ನರ
ಹರಿ ಬಂದು ಒಡನೆಯೆ ಕಾಯ್ದನೆಂಬುದ ಕೇಳಿ
ಅಂಬರೀಷಗೆ ದೂರ್ವಾಸ ಶಾಪವ ಕೊಡ
ಅಂಬುಜಲೋಚನ ಚಕ್ರದಿಂದ
ಬೆಂಬತ್ತಿ ಮುನಿಯ ಶಾಪವ ಪರಿಹರಿಸಿದ
ಕಂಬು ಚಕ್ರಧರ ಹರಿಯೆಂಬುದ ಕೇಳಿ
ಛಲಬೇಡ ರಾಮನ ಲಲನೆಯ ಬಿಡು
ಎಂದು ತಲೆಹತ್ತರವಗೆ ಪೇಳಲು ತಮ್ಮನ |
ಬಳಲಿಸಿ ಹೊರಡಿಸೆ ಅವ ನಿನ್ನ ಮರೆಹೊಗಲು
ಸಲೆ ವಿಭೀಷಣಗೆ ಲಂಕೆಯನಿತ್ತುದನು ಕೇಳಿ
ಸುರ ನರ ನಾಗಲೋಕದ ಭಕ್ತ ಜನರನು
ಪೊರೆಯಲೋಸುಗ ವೈಕುಂಠದಿಂದ ||
ಸಿರಿಸಹಿತದಿ ಬಂದು ಶೇಷಾಚಲದಿ ನಿಂತ
ಪುರಂದರವಿಠಲ ನಿನ್ನಯ ಚರಣವ ಕಂಡು