ಕೀರ್ತನೆ - 216     
 
ಅಂಜಲೇತಕೆ ಮನವೆ ಅನುಗಾಲವು ಕಂಜನಾಭನ ಭಕುತಿ ಕೈಕೊಂಡ ಬಳಿಕ ನಾರಾಯಣನೆಂಬ ನಾಲ್ಕು ಅಕ್ಷರದಿಂದ ಘೋರಪಾಪವನೆಲ್ಲ ಕಳೆಯಬಹುದು || ಶ್ರೀರಾಮನಾಮವೆಂಬ ಸಿಂಗಾಡಿ ತಕ್ಕೊಂಡು ವೈರಿಷಡ್ವರ್ಗಗಳ ವಧೆ ಮಾಡಬಹುದು ಶ್ರೀ ಕೇಶವನೆ ಎಂಬ ಸಿದ್ಧ ಮಂತ್ರಗಳಿಂದ ಕಾಕು ಕರ್ಮಗಳನ್ನು ಕಳೆಯಬಹುದು ।। ವೈಕುಂಠಪತಿ ಎಂಬ ವಜ್ರವನೆ ತಕ್ಕೊಂಡು ನೂಕಿ ಯಮಬಂಟರನು ನುಗ್ಗು ಮಾಡಲುಬಹುದು ಹರಿ ವಾಸುದೇವನೆಂಬ ಅಮೃತಪಾನಗಳಿಂದ ಮರಣ ಜನನಗಳೆರಡ ಜಯಿಸಬಹುದು ।। ಅರಿತರೆ ಮನದೊಳಗೆ ಪುರಂದರವಿಠಲನ ಸರಸ ಸದ್ಗತಿಯನ್ನು ಸವಿಗಾಣಬಹುದು