ಶೃಂಗಾರವಾಗಿದೆ ಸಿರಿರಂಗನ ಮಂಚ
ಅಂಗನೆ ಮಹಲಕುಮಿಯರಸ ಮಲಗುವ ಮಂಚ
ಬಡಿಗ ಮುಟ್ಟದ ಮಂಚ | ಮಡುವಿನೊಳಿಹ ಮಂಚ ।
ಮೃಡನ ತೋಳಲಿ ನೆಲಸಿಹ ಮಂಚ |
ಹೆಡೆಯುಳ್ಳ ಹೊಸಮಂಚ ಪೊಡವಿ ಹೊತ್ತಿಹ ಮಂಚ ।
ಕಡಲಶಯನ ಶ್ರೀ ರಂಗನ ಮಂಚ
ಕಣ್ಣುಮೂಗಿನ ಮಂಚ ಬೆನ್ನು ಬಾಗಿದ ಮಂಚ |
ಹುಣ್ಣಿಮೆಯ ಚಂದ್ರಮನ ಅಡ್ಡಗಟ್ಟುವಮಂಚ ॥
ಬಣ್ಣ ಬಿಳುಪಿನ ಮಂಚ ಹೊನ್ನು ಕಾದಿಹ ಮಂಚ ।
ಚೆನ್ನಿಗ ಪರೀಕ್ಷಿತನ ಪ್ರಾಣವ ಕೊಂಡ ಮಂಚ
ಕಾಲಿಲ್ಲದೋಡುವ ಮಂಚ | ಗಾಳಿ ನುಂಗುವ ಮಂಚ |
ನಾಲಿಗೆಯೆರಡುಳ್ಳ ವಿಷದ ಮಂಚ ॥
ಏಳು ಹೆಡೆಯ ಮಂಚ | ಮೂಲೋಕದೊಡೆಯನ ಮಂಚ |
ಕಾಳಗದಲಿ ಕಿರೀಟಿಯ ಮುಕುಟಕೊಂಡ ಮಂಚ
ಹಕ್ಕಿಗೆ ಹಗೆಯಾದ ಮಂಚ | ರೊಕ್ಕ ಮುಟ್ಟದ ಮಂಚ |
ರಕ್ಕಸರೆದೆದಲ್ಲಣನ ಮಂಚ ॥
ಸೊಕ್ಕು ಪಿಡಿದ ಮಂಚ । ಫಕ್ಕನೆ ಪೋಗುವ ಮಂಚ |
ಲಕ್ಕುಮಿ ರಮಣ ಶ್ರೀ ಹರಿಯ ಮಂಚ
ಅಂಕುಡೊಂಕಿನ ಮಂಚ । ಅಕಲಂಕ ಮಹಿಮ ಮಂಚ ।
ಸಂಕರುಷಣನೆಂಬ ಸುಖದ ಮಂಚ ।
ಶಂಕರನ ಕೊರಳಿಗೆ ಪದಕವಾಗಿಹ ಮಂಚ ।
ವೆಂಕಟ ಪುರಂದರ ವಿಠಲ ರಾಯನ ಮಂಚ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಶೇಷದೇವರು