ಕೀರ್ತನೆ - 210     
 
ಚಂದ್ರಚೂಡ ಶಿವಶಂಕರ ಪಾರ್ವತಿ ರಮಣಾ ನಿನಗೆ ನಮೋ ನಮೋ ಸುಂದರ ಮೃಗಧರ ಪಿನಾಕಧರ ಹರ । ಗಂಗಾಧರ ಗಜಚರ್ಮಾಂಬರಧರ | ನಂದಿವಾಹನಾನಂದದಿಂದ ಮೂಜಗದಿ ಮೆರೆವನು ನೀನೆ | ಕಂದರ್ಪನ ಕ್ರೋಧದಿಂದ ಕಣ್ಣೆರೆದು ಕೊಂದ ಉಗ್ರನು ನೀನೆ ॥ ಅಂದು ಅಮೃತ ಘಟದಿಂದುದಿಸಿದ ವಿಷತಂದು ಭುಂಜಿಸಿದವನು ನೀನೆ | ಬಂದು ಚೆಂದದಿ ಇಂದಿರೇಶ ಶ್ರೀ ರಾಮನ ಪೊಂದಿ ಪೊಗಳುವವ ನೀನೆ ಬಾಲಮೃಕಂಡನ ಕಾಲನು ಎಳೆವಾಗ ಪಾಲಿಸಿದಾತನು ನೀನೆ । ನೀಲಕಂಠ ಕಾಲಕೂಟ ವಿಷವ ಮೆದ್ದ ಶೂಲಪಾಣಿಯು ನೀನೆ | ವಾಲಾಯದಿ ಕಪಾಲವ ಪಿಡಿದು ಭಿಕ್ಷೆ ಕೇಳುವ ದಿಗಂಬರ ನೀನೆ । ಜಾಲ ಮಾಡುವ ಗೋಪಾಲನೆಂಬ ಪೆಣ್ಣಿಗೆ ಮರುಳಾದವ ನೀನೆ ಧರೆಗೆ ದಕ್ಷಿಣ ಕಾವೇರಿ ತೀರ ಕುಂಭಪುರನಿವಾಸನು ನೀನೆ | ಕರದಲಿ ವೀಣೆಯ ನುಡಿಸುವ ನಮ್ಮ ಉರಗಭೂಷಣನು ನೀನೆ || ಕೊರಳಲಿ ಭಸ್ಮ ರುದ್ರಾಕ್ಷಿಯ ಧರಿಸಿದ ಪರಮ ವೈಷ್ಣವನು ನೀನೆ । ಗರುಡ ಗಮನ ಶ್ರೀ ಪುರಂದರ ವಿಠಲನ ಪ್ರಾಣ ಪ್ರಿಯನು ನೀನೆ