ಕೀರ್ತನೆ - 207     
 
ವೃಂದಾವನವೇ ಮಂದಿರವಾಗಿಹ ಇಂದಿರೆ ಶ್ರೀ ತುಳಸಿ | ನಂದನಂದನ ಮುಕುಂದಗೆ ಪ್ರಿಯಳಾದ | ಚೆಂದದ ಶ್ರೀ ತುಳಸಿ ತುಳಸಿಯ ವನದಲಿ ಹರಿಯಿಹನೆಂಬುದ | ಶ್ರುತಿ ಸಾರುತಲಿದೆ ಕೇಳಿ | ತುಳಸೀದರ್ಶನದಿಂದ ದುರಿತಗಳೆಲ್ಲವು ದೂರವಾಗುವುವು ಕೇಳಿ | ತುಳಸೀ ಸ್ಪರ್ಶವ ಮಾಡೆ ದೇಹ ಪಾವನವೆಂದು ತಿಳಿದಿಲ್ಲವೇನು ಪೇಳಿ | ತುಳಸೀಸ್ಮರಣೆ ಮಾಡಿ ಸಕಲೇಷ್ಟಗಳ ಪಡೆದು ಸುಖದಿಂದ ನೀವು ಬಾಳಿ ಮೂಲಮೃತ್ತಿಕೆಯನು ಮುಖದಲಿ ಧರಿಸಲು ಮೂಲೋಕ ವಶವಹುದು | ಮಾಲೆ ಕೊರಳಲಿಟ್ಟ ಮನುಜಗೆ ಮುಕ್ತಿಯ ಮಾರ್ಗವು ತೋರುವುದು || ಕಾಲಕಾಲಗಳಲಿ ಮಾಡುವ ದುಷ್ಕರ್ಮ ಕಳೆದು ಬೀಸಾಡುವುದು | ಕಾಲನ ದೂತರ ಕಳಚಿ ಕೈವಲ್ಯದ ಲೀಲೆಯ ತೋರುವುದು ಧರೆಯೊಳು ಸುಜನರ ಮರೆಯದೆ ಸಲಹುವ ವರಲಕ್ಷ್ಮಿ ಶ್ರೀ ತುಳಸಿ | ಪರಮಭಕ್ತರ ಪಾಪಗಳನೆಲ್ಲ ತರಿದು ಪಾ- ವನ ಮಾಡುವಳು ತುಳಸಿ || ಸಿರಿ ಆಯು ಪುತ್ರಾದಿ ಸಂಪದಗಳನಿತ್ತು ಹರುಷವೀವಳು ತುಳಸಿ || ಪುರಂದರವಿಠಲನ ಚರಣ ಕಮಲಗಳ ಸ್ಮರಣೆಯೀವಳು ತುಳಸಿ