ವೃಂದಾವನದೇವಿ ನಮೋನಮೋ-ಚೆಲ್ವ-|
ಮಂದರಧರನ ಮನಃಪ್ರಿಯಳೆ
ನಿನ್ನ ಸೇವಿಸಿ ಉದಕವನು ಎರೆಯಲು |
ಮುನ್ನ ಮಾಡಿದ ಪಾಪವಳಿಯುವುದು ।।
ಎನ್ನ ಇಪ್ಪತ್ತೊಂದು ಕುಲದವರಿಗೆ ಎಲ್ಲ ।
ಉನ್ನತ ವೈಕುಂಠಪದವೀವಳೆ
ಒಂದೊಂದು ದಳದಲಿ ಒಂದೊಂದು ಮೂರುತಿ |
ಸಂದಣಿಸಿವೆ ಬಹು ಗುಪಿತದಲಿ ||
ಬಂದು ಕುಂಕುಮ ಶಂಖಚಕ್ರವಿರಿಸಿದರೆ ।
ತಂದೆ ನಾರಾಯಣ ಕರೆದೊಯ್ಯುವ
ಹರಿಗೆ ಅರ್ಪಿಸಿದ ತುಳಸಿ ನಿರ್ಮಾಲ್ಯವ |
ಕೊರಳೊಳು ಧರಿಸಿ ಕರ್ಣದೊಳಿಟ್ಟರೆ ॥
ದುರಿತ ರಾಶಿಗಳೆಲ್ಲ ಅಂಜಿ ಓಡುವುವು ಶ್ರೀ-|
ಹರಿಯು ತನ್ನವರೆಂದು ಕೈಪಿಡಿವ
ಹತ್ತು ಪ್ರದಕ್ಷಿಣಿ ಹತ್ತು ವಂದನೆ ಮಾಡೆ |
ಉತ್ತಮ ವೈಕುಂಠ ಪದವೀವಳು ||
ಭಕ್ತಿಯಿಂದಲಿ ಬಂದು ಕೈಮುಗಿದವರನು |
ಕರ್ತೃನಾರಾಯಣ ಕರೆದೊಯ್ದನು
ಆವಾವ ಪರಿಯಲಿ ಸೇವೆಯ ಮಾಡಲು |
ಪಾವನ ವೈಕುಂಠಪದವೀವಳೆ ||
ದೇವ ಶ್ರೀ ಪುರಂದರ ವಿಠಲರಾಯನ |
ದೇವಿ ನಿನ್ನ ಮುಟ್ಟಿ ತ್ರಾಹಿ ಎಂಬೆ