ಶ್ರೀಮದಾನಂದ ತೀರ್ಥ ಹನುಮ । ಭೀಮ
ನಿನ್ನ ಸಮಾನ ಪುರುಷರು ಈ ಮೂಜಗದೊಳಿಲ್ಲವೆಂದು
ಶ್ರೀ ರಾಮ ಸಹಭೋಜನವನೀಯನೆ?
ಹರಿವಿರಿಂಚಿ ಸಹಾಯದಿಂದ | ಹರನು
ತ್ರಿಪುರವನಳಿಯಲಾಗ |
ಬರಿದೆ ಕೊಂಡಾಡಿದರು ಸರ್ವರು |
ಅರಿಯದೆಯೆ ನಿನ್ನ ಸಾಹಸ ||
ಶರಧಿ ಲಂಘಿಸಿ ದಾನವರನು ತರಿದು
ಸೀತೆಗೆ ಉಂಗುರವಿತ್ತು |
ಪುರವನುರುಹಿ ಹರಿಯಡಿಗೆ ಆ ಕುರುಹ
ತಂದು ಮುಟ್ಟಿಸಿದೆಯೊ
ಸಾಸಿರದ ತನ್ನ ಪೆಡೆಯ ನಡುವೆ । ಈಸು
ಸಚರಾಚರವನೆಲ್ಲ |
ಸಾಸಿವೆಯಂದದಲಿ ಇಟ್ಟಾ । ಶೇಷನ-ಮೂಲರೂಪದ ॥
ಆ ಶಕುತಿಯನು ತೋರಿಸಲು
ದಶಾಸ್ಯನೆಳೆಯುವ ಸೌಮಿತ್ರಿಯನು
ದಾಶರಥಿಯ ಬಳಿಗೆ ತಂದು । ನೀ ಸಲಹಿದೆ ಜಗವರಿಯಲು
ತನ್ನ ಜನನಿಯೊಬ್ಬಳಿಗೆ ಸುಪರ್ಣ ಬಳಲಿ ಸುಧೆಯ ತರಲು
ಇನ್ನು ಪೊಗಳುತಿಹುದು ಲೋಕ | ನಿನ್ನಂತೆ ದೂರದಲಿಹ |
ಉನ್ನತದ ಶತಯೋಜನಗಲದ | ಅನ್ಯರು ತರಲಾರದ ಸಂಜೀ |
ವನ್ನ ಗಿರಿಯ ತಂದು ಕಪಿಗಳನ್ನು ಕಾಯ್ದೆ ತವಕದಿಂದ
ಸಕಲ ಪ್ಲವಗನಿಕರ ರಾಮನ | ತ್ರಿಕರಣ ಸೇವೆಯನು ಮಾಡಿ !
ಮುಕುತಿ ಬೇಡಲಿತ್ತು ನಿನಗೇನು | ಬೇಕೆಂದು ಕೇಳಲು ನೀನು ನಾ |
ಲುಕು ಪುರುಷಾರ್ಥಗಳ ಜರಿದು | ಭಕುತಿಯ ಕೊಡು ಎನಲು ನವಕ
ನಕದ ಮಾಲೆ ಕೊರಳಿಗಿಟ್ಟು ಜಾ | ನಕಿರಮಣನು ನಿನ್ನ ಪೊಗಳಿದ
ಶರಧಿಯ ಮಥನದೊಳುದಿಸಿದ | ಗರಳ ಜಗತ್ತನು ಅಂಜಿಸೆ
ಸಿರಿಯರಸನ ಪೆರ್ಮೆಯಿಂದ | ಸುರಿದು
ಅದನು ಜೀರ್ಣಿಸಿಕೊಂಡ ||
ಮಾರುತನವತಾರ ವೃಕೋ । ದರನೆ ನೀನು ಎಂದರಿಯದೆ
ಮರುಳ ಕೌರವರಿಕ್ಕಿದ ವಿಷವ । ಭರದಿ
ಉಂಡು ತೇಗಿದುದರಿದೆ ?
ಅವನಿ ಭಾರಕೆ ಮುಖ್ಯರಾದ | ಕವುರವ ಕೀಚಕಾದಿಗಳನು
ಬವರ ಮುಖದಿ ನಗುತ ಗೆಲಿದು
ಹವಿಯ ಕೃಷ್ಣನಿಗರುಪಿಸಿ
ದಿವಿಜರೆದುರುಗೊಳಲು ಅವರ |
ನವರತಾರತಮ್ಯದಿ ಮನ್ನಿಸಿ ।
ಪವನಲೋಕದೊಳು ಮೆರೆದೆ ದ್ರವುಪದಿಯ ಸಹಿತನಾಗಿ
ಸುರಾಸುರರ ಸಂಗ್ರಾಮದಲಿ । ಅರಿ
ವಿಪ್ರಚಿತ್ತಿಯ ನೀನು ಕೊಲ್ಲಲು |
ವಿರಿಂಚಿ-ಹರರ ವರದಿಂದವನೆ |
ಜರಾಸಂಧನಾಗಿ ಇಳೆಯೊಳು |
ಅರಸುಗಳನು ಕಾಡಲವನ ಸರ್ರನೆ ಸೀಳಿ ಪಶುವಿನಂತೆ
ಹರಿಗೆ ಅರ್ಪಿಸಲವನು ಸಕಲಾ । ಧ್ವರಕ್ಕಿಂತಲು ತೃಪ್ತನಾದ
ನಡುಮನೆಯೆಂಬ ಸಾಧುದ್ವಿಜನ | ಮಡದಿಯ
ಬಸಿರಿನಲಿ ಉದಿಸಿ
ಕಡು ಕುಮತದ ಮಾಯಿಗಳನು | ಅಡಿಗಡಿಗೇ ಸಚ್ಛಾಸ್ತ್ರದಿ ॥
ತಡೆದು ಆನಂದ ಶುಭಗುಣಗಳ ಕಡಲು
ಹರಿಸರ್ವೋತ್ತಮನೆಂದು
ಒಡಂಬಡಿಸಿ ಸ್ವಮತವನ್ನು । ಪೊಡವಿಯೊಳಗೆ
ಸ್ಥಾಪಿಸಿದೆಯೊ ನೀ
ಮರುತ ನಿನ್ನವತಾರ ತ್ರಯವ | ನರಿತು
ಭಜಿಪಗೆ ಶ್ವೇತದ್ವೀಪ ।
ದರುಶನವನೆ ಮಾಡಿಸಿ ಶ್ರೀ | ಪುರಂದರ ವಿಠಲೇಶನ ।
ಕರುಣಕಟಾಕ್ಷದಿಂದ ವೈಕುಂಠ ಪುರದಿ ಅನಂತಾಸನದಲಿ |
ಪರಮಾನಂದವ ಪಡಿಸಿ ಹೊರೆವೆ ।
ಪರಿಪರಿಯ ಭೋಗಗಳನಿತ್ತು
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಹನುಮ-ಭೀಮ-ಮಧ್ವರು