ಕೀರ್ತನೆ - 180     
 
ಮಧ್ವರಾಯರ ನೆನೆದು ಶುದ್ಧರಾಗಿರೊ | ಹೊದ್ದಿ ವೈಷ್ಣವ ಮತ ಭವಾಬ್ಧಿ ದಾಟಿರೋ ಉದಯದಲಿ ಏಳುವಾಗ ನದಿಯ ಸ್ನಾನ ಮಾಡುವಾಗ ಒದಗಿ ನಿತ್ಯ ಕರ್ಮಗಳನ್ನು ನಡೆಸುವಾಗ || ಹೃದಯದಲಿ ಬೀಜಾಕ್ಷರ ಮಂತ್ರಗಳನ್ನು ಜಪಿಸುವಾಗ ಸದಮಲಾನಂದ ಹನುಮನನ್ನು ನೆನೆಯಿರೊ ಕಾಮವಿಲ್ಲದ ಹರಿಯ ಪೂಜೆ ವೈಶ್ವದೇವ ಮಾಡುವಾಗ ಪ್ರೇಮದಿಂದ ವೈಷ್ಣವರು ಅರ್ಚಿಸುವಾಗ ॥ ಆ ಮಹಾ ಭಕ್ಷ್ಯಭೋಜ್ಯ ಆರೋಗಣೆ ಮಾಡುವಾಗ ನೇಮದಿಂದ ಕೌರವಾಂತಕ ಭೀಮಸೇನನ ನೆನೆಯಿರೊ ಕರಗಳನ್ನು ತೊಳೆದು ತೀರ್ಥ ತುಳಸೀದಳವ ಮೆಲ್ಲುವಾಗ ಪರಿಪರಿಯ ಪುಷ್ಪವೀಳ್ಯ ಅರ್ಪಿಸುವಾಗ ಸರುವಾಂತರ್ಯಾಮಿ ಗುರುಮಧ್ವರಂತರಾತ್ಮಕ ಪುರಂದರ ವಿಠಲಗೆ ಸಮರ್ಪಣೆ ಮಾಡಿರೊ