ಮರುಳು ಮಾಡಿಕೊಂಡೆಯಲ್ಲೇ - ಮಾಯಾದೇವಿಯೆ
ಇರುಳು ಹಗಲು ಏಕವಾಗಿ ಹರಿಯು ನಿನ್ನ ಬಿಡದಿಪ್ಪಂತೆ
ಜ್ಞಾನಿಗಳು ನಿತ್ಯ ಅನ್ನ-ಪಾನದಿಗಳನ್ನು ಬಿಟ್ಟು |
ನಾನಾವಿಧ ತಪವಿದ್ದರು-ಧ್ಯಾನಕೆ ಸಿಲುಕದವನ
ಸರ್ವಸಂಗವ ಬಿಟ್ಟು ಸಂ-ನ್ಯಾಸಿಯಾದ ಕಾಲಕು |
ಸರ್ವದಾ ತನ್ನೆದೆಯ ಮೇಲೆ ಬಿಡದೆ ನಿನ್ನ ಧರಿಸಿಪ್ಪಂತೆ
ಪ್ರಳಯಕಾಲದಲ್ಲಿ ಆಲ-ದೆಲೆಯ ಮೇಲೆ ಮಲಗಿದ್ದಾಗ |
ಹಲವು ಆಭರಣಂಗಳು-ಜಲವು ಆಗಿ ಜಾಣತನದಿ
ರಂಗನು ಭೂಲೋಕದಿ-ಭುಜಂಗಗಿರಿಯೊಳಲಮೇಲು ।
ಮಂಗಪತಿಯಾಗಿ ನಿನ್ನ-ಅಂಗೀಕರಿಸುವಂತೆ
ಮಕ್ಕಳ ಪಡೆದರೆ ನಿನ್ನ-ಚೊಕ್ಕತನವು ಪೋಪುದೆಂದು ।
ಪೊಕ್ಕುಳೊಳು ಮಕ್ಕಳ ಪಡೆದು-ಕಕ್ಕುಲಾತಿ ಪಡುವಂತೆ
ಎಡಕೆ ಭೂಮಿ ಬಲಕೆ ಶ್ರೀಯು-ಎದುರಿನಲ್ಲಿ ದುರ್ಗಾದೇವಿ ।
ತೊಡೆಯ ಮೇಲೆ ಲಕುಮಿಯಾಗಿ- ಬಿಡದೆ ಮುದ್ದಾಡುವಂತೆ
ಎಂದೆಂದಿಗೂ ಮರೆಯೆ ನಿನ್ನಾ-ನಂದದಿ ಜನರಿಗೆಲ್ಲ |
ತಂದು ತೋರೇ ಸ್ವಾಧೀನ ಪು-ರಂದರವಿಠಲ ಹರಿಯ