ಕೀರ್ತನೆ - 162     
 
ಈಗಲುಪ್ಪವಡಿಸಿದಳು ಇಂದಿರಾದೇವಿ ಯೋಗರತಿ ನಿದ್ರೆ ತಿಳಿದು ಕಡೆಗಣ್ಣ ಕಪ್ಪ ಅಂಗೈಯಿಂದಲೊರಸುತ ಸಡಲಿದ ತುರುಬ ಬಿಗಿದು ಕಟ್ಟುತ ।। ನಡುವಿನೊಡ್ಯಾಣವ ನಟನೆಯಿಂ ತಿರುವುತ ಕಡಗ ಕಂಕಣ ಬಳೆ ಕರದಿ ಘಲ್ಲೆನುತ ಕೂರುಗುರ ಗಾಯವನು ಕೊನೆ ಬೆರಳಲೊತ್ತುತ ಹಾರದ ತೊಡಕನು ಬಿಚ್ಚಿ ಹಾಕುತ ।। ಜಾರಿದ ಜಾಜಿದಂಡೆಸರವನೀಡಾಡುತ ಮೋರೆಯ ಕಿರುಬೆವರ ಮುಂಜೆರಗಿಲೊರಸುತ ಕಕ್ಕಸ ಕುಚದೊಳಿರ್ದ ಕಸ್ತುರಿಯನೊರಸುತ ಚಕ್ಕನೆ ಕನ್ನಡಿಯೊಳು ಮುಖ ನೋಡುತ || ಅಕ್ಕರದ ತಾಂಬೂಲ ಸರಸದಿಂದುಗುಳುತ ಚೊಕ್ಕ ಪುರಂದರ ವಿಠಲನ ನೋಡಿ ನಗುತ