ಕೀರ್ತನೆ - 154     
 
ಹಣ್ಣು ತಾ ಬೆಣ್ಣೆ ತಾರೆ ಗೋಪಮ್ಮ-1 ಹಣ್ಣು ತಾ ಬೆಣ್ಣೆ ತಾರೆ ಅಡವಿಯೊಳಗೆ ಅಸುರನ ಕೊಂದ ಕೈಗೆ ಮಡುವಿನೊಳಗೆ ಮಕರನ ಸೀಳ್ದ ಕೈಗೆ | ಪೊಡಿವಿಯೊಳಗೆ ಚೆಂಡನಾಡಿದ ಕೈಗೆ | ಸಡಗರದಲಿ ಭೂಮಿ ಬೇಡಿದ ಕೈಗೆ ಶಂಖ ಚಕ್ರಗಳ ಪಿಡಿದಂಥ ಕೈಗೆ | ಶಂಕೆಯಿಲ್ಲದೆ ಮಾವನ ಕೊಂದ ಕೈಗೆ ॥ ಬಿಂಕದಿಂದಲಿ ಕೊಳಲೂದುವ ಕೈಗೆ ಪಂಕಜಮುಖಿಯರ ಕುಣಿಸುವ ಕೈಗೆ ದಿಟ್ಟತನದಲಿ ಬೆಟ್ಟವೆತ್ತಿದ ಕೈಗೆ | ಸೃಷ್ಟಿಯ ದಾನವ ಬೇಡಿದ ಕೈಗೆ | ದುಷ್ಟಭೂಪರನೆಲ್ಲ ಮಡುಹಿದ ಕೈಗೆ ಕೆಟ್ಟ ದಾನವರನು ಸದೆಬಡಿದ ಕೈಗೆ ಕಾಳಿಯ ಮಡುವನು ಕಲಕಿದ ಕೈಗೆ | ಸೋಳಸಾಸಿರ ಗೋಪಿಯರಾಳಿದ ಕೈಗೆ ॥ ಮೇಳದ ಭಕ್ತರುದ್ಧರಿಸುವ ಕೈಗೆ । ಏಳು ಗೂಳಿಯ ಗೆದ್ದ ಯದುಪನ ಕೈಗೆ ಬಿಲ್ಲು ಬಾಣಗಳನು ಪಿಡಿದಂಥ ಕೈಗೆ | ಮಲ್ಲ ಸಾಧನೆಯನು ಮಾಡಿದ ಕೈಗೆ ॥ ಎಲ್ಲ ದೇವರದೇವ ರಂಗನ ಕೈಗೆ | ಬಲ್ಲಿದ ಪುರಂದರವಿಠಲನ ಕೈಗೆ