ಕೀರ್ತನೆ - 146     
 
ವಾಸಕೆ ಯೋಗ್ಯವಲ್ಲ - ಗೋಕುಲವನ್ನು 1 ಬೇಸರವಾಯಿತಲ್ಲ ದೋಷರಹಿತ ಸೋಳ ಸಾಸಿರ ಹೆಂಗಳ | ಶೇಷಶಯನ ಕೃಷ್ಣ ಮೋಸ ಮಾಡಿದ ಮೇಲೆ ರಂಗ ಮಧುರೆಗೆಂದು – ಅಕ್ರೂರನ | ಸಂಗಡ ಪೋದನಂತೆ | ಅಂಗಜನಯ್ಯನ ಸಂಗವಿಲ್ಲದ ಮೇಲೆ । ಹೆಂಗಳ ಜನ್ಮವಿದೇತಕೆ ಸುಡಲಿ ನಳಿನಾಕ್ಷ ಮಧುರೆಗೆಂದು - ಪೋಗುವಂಥ | ಸುಳಿವು ತಿಳಿಯಲಿಲ್ಲವೆ ॥ ಅಳಿ-ಗಿಳಿ-ಕೋಗಿಲೆಗಳ ರವವನು ಕೇಳಿ | ಗಳಿಗೆ ಕಳೆವುದೊಂದು ಯುಗವಾದ ಬಳಿಕಿನ್ನು ಪತಿ-ಸುತರನು ಬಿಟ್ಟು - ಶ್ರೀಪತಿ ನೀನೆ :. ಗತಿಯೆಂದು ನಂಬಿರಲು ॥ ಮತಿವಂತ ಅಕ್ರೂರನ ಜೊತೆಯೊಳು ಶ್ರೀಹರಿ । ರಥವನೇರಿ ತಾ ಮಧುರೆಗೆ ಪೋದ ಮೇಲೆ ಮಡದಿಯರಂತೆ ನಾವು – ಒಡೆಯನೆಂದು ದೃಢದಿ ನಂಬಿದ್ದೆವಮ್ಮ || ಕಡುಚೆಲ್ವ ಕೃಷ್ಣನು ನಡುನೀರಲಿ ಕೈಯ | ಪಿಡಿಯದೆ ಬಿಟ್ಟು ತಾ ಕಡೆಗೆ ಸಾಗಿದ ಮೇಲೆ ಅಚ್ಯುತಾನಂತನನ್ನು - ನಮ್ಮವನೆಂದು | ನೆಚ್ಚಿಕೊಂಡಿದ್ದೆವಮ್ಮ || ಮೆಚ್ಚಿದ ಬಾಲೆಯರಿಗೆ ಹುಚ್ಚು ಹಿಡಿಸಿ ಕ್ರೂರ| ಹೆಚ್ಚಿದ ಮಾತನು ಕೊಚ್ಚಿ ಪೋದ ಮೇಲೆ ಮುರಲಿ ನಾದವ ಕೇಳಿ-ತರಳೆಯರೆಲ್ಲ | ಮರುಳಾಗಿ ಬರುತ್ತಿದ್ದೆವೆ || ದುರುಳ ಮನ್ಮಥನ ಪೂಸರಳಿಗೆ ಒಪ್ಪಿಸಿ | ಇರುಳೇ ಮಧುರೆಗೆ ತೆರಳಿ ಪೋದ ಮೇಲೆ ಸುರತಸುಖಗಳೆಂಬ – ಶರಧಿಯೊಳು | ಹರುಷಪಡುತಲಿದ್ದೆವೆ ॥ ನಿರುತ ಅವನ ಗುಣ ಚರಿತೆಯ ತೋರದೆ | ತ್ವರದಿ ನಮ್ಮೆಲ್ಲರ ತೊರೆದು ಪೋದ ಮೇಲೆ ಕಂತುಪಿತನ ಕಾಣದೆ ಈ ಪ್ರಾಣವು । ಎಂತು ನಿಲ್ಲುವುದಮ್ಮ || ಅಂತರಂಗದಾಸೆ ಶಾಂತಮಾಡದೆ ಪೋದ । ಕಾಂತನ ಕಾಣದೆ ಭ್ರಾಂತರಾದ ಮೇಲೆ ಇಂದಿರಾಪತಿ ನಮ್ಮ - ಮಂದಿರದೊಳು | ಬಂದು ಹೋಗುತಲಿರಲು || ಸಂದೇಹದಿ ಇವನ ಹೊಂದಿದರಿವರೆಂದು | ಮಂದಿಯೊಳಗೆ ಅಪನಿಂದೆಯ ಪೊತ್ತೆವಮ್ಮ ಜಾರೆಯರಾದರೆಂದು - ನಮ್ಮವರೆಲ್ಲ | ಸಾರಿ ಕೈಬಿಟ್ಟರಮ್ಮ || ವಾರಿಜಾಕ್ಷನು ಬರಿ ದೂರಿಗೆ ಗುರಿಮಾಡಿ || ದಾರಿತೋರದೆ ಪೋದನಾರಸೇರುವೆವಮ್ಮ ಬೆರೆವುದಿನ್ನೆಂದು ನಾವು - ಶ್ರೀಹರಿ ಸಂಗ । ದೊರೆವುದಿನ್ನೆಂದಿಗಮ್ಮ || ಕರುಣಾಕರ ನಮ್ಮ ಪುರಂದರವಿಠಲನು । ಕರೆದುಕೊಳ್ಳದೆ ನಮ್ಮ ತೊರೆದು ಪೋದ ಮೇಲೆ