ಮಂದಗಮನೆ, ಇವನಾರೆ ಪೇಳಮ್ಮ |
ಮಂದರಧರ ಗೋವಿಂದ ಕಾಣಮ್ಮ
ಕೆಂದಳಿರ ನಖ ಶಶಿಬಿಂಬ ಪಾದಪದ್ಮ ।
ಅಂದುಗೆಯಿಟ್ಟವನಾರು ಪೇಳಮ್ಮ ||
ಅಂದು ಕಾಳಿಂಗನ ಪೆಡೆಯ ತುಳಿದ ದಿಟ್ಟ ।
ನಂದನ ಕಂದ ಮುಕುಂದ ಕಾಣಮ್ಮ
ಉಡುಗೆ ಪೀತಾಂಬರ ನಡುವಿಗೆ ಉಡುದಾರ |
ಕಡಗ-ಕಂಕಣವಿಟ್ಟವನಾರಮ್ಮ ||
ಮಡದಿ ಕೇಳ್ ಸಕಲಲೋಕಂಗಳ ಕುಕ್ಷಿಯೊಳ್ |
ಒಡನೆ ತೋರಿದ ಜಗದೊಡೆಯ ಕಾಣಮ್ಮ
ನೀರದ ನೀಲದಂತೆಸೆವ ವಕ್ಷದಿ ಕೇ-।
ಯೂರ-ಹಾರಗಳನಿಟ್ಟವನಾರಮ್ಮ ॥
ನೀರೆ ಕೇಳು ನಿರ್ಜರರಾದವರಿಗೆ 1
ಪ್ರೇರಿಸಿ ಫಲವಿತ್ತುದಾರಿ ಕಾಣಮ್ಮ
ಶಂಖ ಚಕ್ರವ, ಗದೆ-ಪದ್ಮ ಕೈಯೊಳಗಿಟ್ಟ-1
ಲಂಕೃತನಹನೀತನಾರಮ್ಮ ||
ಪಂಕಜಮುಖಿ ಶ್ರೀಭೂದೇವಿಯರರಸನು ।
ಶಂಕೆ ಇಲ್ಲದೆ ಗೋಪೀತನಯ ಕಾಣಮ್ಮ
ಕಂಬುಕಂಧರ ಕರ್ಣಾಲಂಬಿತ ಕುಂಡಲ |
ಅಂಬುಜ ಮುಖದವನಾರೆ ಪೇಳಮ್ಮ ||
ರಂಭೆ ಕೇಳೀತ ಪುರಂದರವಿಠಲ |
ನಂಬಿದ ಭಕ್ತಕುಟುಂಬಿ ಕೇಳಮ್ಮ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಕೃಷ್ಣಲೀಲೆ