ಕೀರ್ತನೆ - 112     
 
ನೀ ಕೊಡೆ ನಾ ಬಿಡೆ ಕೇಳಯ್ಯ-ಹರಿ-1 ಗೋಕುಲ ಪತಿ ಗೋವಿಂದಯ್ಯ ನೋಡುವೆ ನಿನ್ನನು ಪಾಡುವೆ ಗುಣಗಳ | ಕಾಡುವೆ ಬೇಡುವೆ ನಾಡೊಳಗೆ ॥ ಮೋಡಿಯ ಬಿಡು ಕೊಡು ಮೊದಲಿಗೆ ಬಡ್ಡಿಯ | ಕಾಡೊಳು ತುರುಗಳ ಕಾಯ್ದರಸನೆ ಹರಿ ಎಂಟಕ್ಷರವಿವೆ ದ್ವಯಸಾಕ್ಷಿಗಳಿವೆ । ಗಂಟಿಗೆ ಮೋಸವೆ ದಾಸರಿಗೆ ॥ ಎಂಟುಂಟೆನಿಸುವೆ ಬಂಟರ ಬಾಯಲಿ | ತುಂಟತನವ ಬಿಡು ತುಡುಗರರಸೆ ಅಪ್ಪನೆ ಅಯ್ಯನೆ ಅಮರರಿಗೊಲಿದನೆ ! ಸರ್ಪನೆ ಮೇಲೆ ಮಲಗಿಪ್ಪವನೆ । ಒಪ್ಪಿಸಿಕೊಟ್ಟರೆ ಪುರಂದರ ವಿಠಲನೆ । ಒಪ್ಪವ ತೋರುವೆ ಒಡೆಯನಿಗೆ